ಹೊಸದಿಗಂತ ವರದಿ ಮಡಿಕೇರಿ:
1785 ರ ಡಿ.12 ರಂದು ಟಿಪ್ಪು ಹಾಗೂ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಕುತಂತ್ರದಿಂದ ಹತ್ಯೆಗೀಡಾದ ಕೊಡವ ಬುಡಕಟ್ಟು ವೀರರ ನೆನಪಿಗಾಗಿ ಅಂತರರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸುವವರೆಗೆ ಶಾಂತಿಯುತ ಹೋರಾಟ ಮುಂದುವರೆಯಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿ ಎನ್ ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ದೇವಟ್ ಪರಂಬುವಿನಲ್ಲಿ ಸಿಎನ್‌ಸಿ ವತಿಯಿಂದ ನಡೆದ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಹಿರಿಯರನ್ನು ಕಳೆದುಕೊಂಡ ನೋವು ಇಂದಿಗೂ ಮಾಸಿಲ್ಲ. ಈ ಘೋರ ಘಟನೆ ಕೊಡವ ಬುಡಕಟ್ಟು ಜನಾಂಗದ ಸಂಖ್ಯೆಯನ್ನು ಕ್ಷೀಣಿಸುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
32 ಕ್ಕೂ ಹೆಚ್ಚು ಬಾರಿ ಟಿಪ್ಪು ಸೇರಿದಂತೆ ನಾಡಿನ ಶತ್ರುಗಳನ್ನು ಹಿಮ್ಮಟ್ಟಿಸಿದ ವೀರ ಕೊಡವರನ್ನು ಸಂಪೂರ್ಣವಾಗಿ ನಾಶ ಮಾಡಲು ಹೂಡಿದ ಸಂಚಿನಿಂದ ಹಿರಿಯರ ಹತ್ಯೆ ನಡೆದಿದೆ. ಈ ದುರಂತ ನರಮೇಧವನ್ನು ಅಂತರರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು ಮತ್ತು ಸಾವಿಗೀಡಾದವರ ಸ್ಮರಣೆಗಾಗಿ ಸ್ಮಾರಕವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭ ಸಂಘಟನೆಯ ಪ್ರಮುಖರು ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು ಮಂಡಿಸಿದರು.
ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು, ಎಸ್‌ಟಿ ಟ್ಯಾಗ್ ಮೂಲಕ ಕೊಡವ ಬುಡಕಟ್ಟು ಜನಾಂಗದ ಸಮಗ್ರ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು, ಸಂವಿಧಾನದ 25 ಮತ್ತು 26 ನೇ ವಿಧಿಗಳಡಿಯಲ್ಲಿ ಕೊಡವ ಬುಡಕಟ್ಟು ಜನಾಂಗದ “ಸಂಸ್ಕಾರ ಗನ್” ಗೆ ಖಾತರಿ ನೀಡಬೇಕು, ಕೊಡವ ಭಾಷೆಯನ್ನು 8 ನೇ ಶೆಡ್ಯೂಲ್‌ಗೆ ಸೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಮಂದಪಂಡ ಮನೋಜ್, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಚೀಯಬೇರ ಸತೀಶ್ ಹಾಜರಿದ್ದು ಅಗಲಿದ ಹಿರಿಯ ಆತ್ಮಗಳಿಗೆ ಪುಷ್ಪ ನಮನ ಸಲ್ಲಿಸಿದರು.