October 26, 2026
Monday, October 26, 2026
spot_img

ಕಾಫಿ ವಿತ್ ಕರಣ್ ಕಾಂಟ್ರವರ್ಸಿ: ಪತಿ ವಿಜಯ್ ಬೆನ್ನಿಗೆ ನಿಂತು 8 ಪುಟಗಳ ‘ಸಂದೇಶ’ ಬರೆದ ರಶ್ಮಿಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಅಭಿಮಾನಿಗಳಿಗೆ ಖುಷಿ ನೀಡಬೇಕಿತ್ತು. ಆದರೆ, ಶೋನಲ್ಲಿ ಅವರು ಹಂಚಿಕೊಂಡ ಕೆಲವು ಸನ್ನಿವೇಶಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾದವು. ಕೆಲ ವರ್ಷಗಳ ಪ್ರೀತಿಯ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಸಣ್ಣಪುಟ್ಟ ಜೋಕ್ ಹಾಗೂ ಹಳೆಯ ವಿಷಯಗಳನ್ನು ಹಿಡಿದು ಸೋಷಿಯಲ್ ಮೀಡಿಯಾ ಮಂದಿ ದೊಡ್ಡ ಮಟ್ಟದಲ್ಲೇ ಟ್ರೋಲ್ ಮಾಡತೊಡಗಿದರು.

ಶೋನಲ್ಲಿ ವಿಜಯ್ ಹಂಚಿಕೊಂಡ ಕೆಲವು ವಿಷಯಗಳು ಉದಾಹರಣೆಗೆ ಮದುವೆಯಾಗಲು ರಶ್ಮಿಕಾಗೆ 100 ಬಾರಿ ಕೇಳಲು ಹೇಳಿದ್ದು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡದಿರುವುದು ಕೆಲವರ ಕಣ್ಣಿಗೆ ‘ರೆಡ್ ಫ್ಲ್ಯಾಗ್’ ತರಹ ಕಂಡವು. ಇಂಟರ್ನೆಟ್‌ನಲ್ಲಿರುವ ಸೈಕಾಲಜಿಸ್ಟ್‌ಗಳು, ಇನ್‌ಫ್ಲುಯೆನ್ಸರ್‌ಗಳು ಹಾಗೂ ಟ್ರೋಲರ್‌ಗಳು ವಿಜಯ್ ಅವರನ್ನು ‘ಕಂಟ್ರೋಲಿಂಗ್’ ಎಂದೂ, ರಶ್ಮಿಕಾ ಅವರನ್ನು ಪ್ರೀತಿಯಲ್ಲಿ ಕುರುಡಾಗಿದ್ದಾರೆ ಎಂದೂ ಸಾಲು ಸಾಲು ವಿಡಿಯೋಗಳನ್ನು ಮಾಡಿ ಹರಿಯಬಿಟ್ಟರು. ಪ್ರತಿಯೊಬ್ಬರೂ ಈ ಜೋಡಿಯ ವೈಯಕ್ತಿಕ ಜೀವನದ ಮೇಷ್ಟ್ರುಗಳಂತೆ ಮಾತನಾಡಲು ಶುರುಮಾಡಿದರು.

ತಮ್ಮ ದಾಂಪತ್ಯದ ಮೇಲೆ ಬೀಳುತ್ತಿದ್ದ ಈ ಅನಗತ್ಯ ಕಲ್ಲುಗಳಿಗೆ ರಶ್ಮಿಕಾ ಕೊನೆಗೂ ಬ್ರೇಕ್ ಹಾಕಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 8 ಪುಟಗಳ ಸುದೀರ್ಘ ಪತ್ರ ಬರೆಯುವ ಮೂಲಕ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಪ್ರೀತಿಯನ್ನು, ಗಂಡನನ್ನು ಅತ್ಯಂತ ಗಟ್ಟಿಯಾಗಿ ಸಮರ್ಥಿಸಿಕೊಂಡಿರುವ ರಶ್ಮಿಕಾ, “ನನ್ನ ಪ್ರೀತಿಯ ವ್ಯಕ್ತಿಗಳಿಗಾಗಿ ಹೋರಾಡಲು ನಾನು ಎಂದಿಗೂ ಹಿಂದೆಟು ಹಾಕುವುದಿಲ್ಲ” ಎಂದು ಗುಡುಗಿದ್ದಾರೆ.

https://www.instagram.com/p/De84LdOCFWC/?utm_source=ig_web_button_share_sheet

“ತನ್ನ ಗಂಡನನ್ನು ಅತಿಯಾಗಿ ಪ್ರೀತಿಸುವುದು, ಅವರ ಮೇಲೆ ಹುಚ್ಚು ಪ್ರೀತಿ ತೋರಿಸುವುದು ತಪ್ಪಾ?” ಎಂದು ನೇರ ಪ್ರಶ್ನೆ ಹಾಕಿರುವ ಅವರು, ೧೦೦ ಬಾರಿ ಮದುವೆಗೆ ಕೇಳಿದ ವಿಷಯದ ಹಿಂದಿದ್ದ ಕೇವಲ ತಮಾಷೆಯನ್ನು ಸೀರಿಯಸ್ ಆಗಿ ತೆಗೆದುಕೊಂಡವರಿಗೆ ತಕ್ಕ ಉತ್ತರ ನೀಡಿದ್ದಾರೆ.

ರಶ್ಮಿಕಾ ತಮ್ಮ ಪತ್ರದಲ್ಲಿ ಬರೆದ ಅತ್ಯಂತ ಪ್ರಮುಖ ಸಾಲೆಂದರೆ “ಇಂದು ಸೋಷಿಯಲ್ ಮೀಡಿಯಾದಲ್ಲಿ ನನಗೆ ಉಚಿತ ಸಲಹೆ ಕೊಡುತ್ತಿರುವ ಯಾವೊಬ್ಬ ‘ಒಳಿತನ್ನು ಬಯಸುವವರು’ ನಾನು ನೋವಿನಲ್ಲಿರುವಾಗ ಅಥವಾ ಕಷ್ಟದಲ್ಲಿದ್ದಾಗ ನನ್ನ ಜೊತೆ ಇರಲಿಲ್ಲ. ಆ ಎಲ್ಲ ಸಮಯದಲ್ಲಿ ನನ್ನ ಜೊತೆಗೆ ನಿಂತಿದ್ದು ನನ್ನ ಗಂಡ ವಿಜಯ್ ಮಾತ್ರ.” ಎಂದು ರಶ್ಮಿಕಾ ಭಾವುಕರಾಗಿ ಬರೆದುಕೊಂಡಿದ್ದಾರೆ.

ನಾಲ್ಕು ಗಂಟೆಗಳ ನಡುವೆ ಕಾಣುವ ಕೆಲ ನಿಮಿಷಗಳ ವಿಡಿಯೋ ನೋಡಿ ಇಡೀ ಸಂಬಂಧವನ್ನೇ ಅಳೆಯುವ ಸೋಷಿಯಲ್ ಮೀಡಿಯಾ ಸಂಸ್ಕೃತಿಗೆ ರಶ್ಮಿಕಾ ಈ ಮೂಲಕ ಖಡಕ್ ಸಂದೇಶ ನೀಡಿದ್ದಾರೆ. ನಿಜವಾದ ಪ್ರೀತಿ ಎಂದರೆ ಕಷ್ಟ-ಸುಖದಲ್ಲಿ ಜೊತೆಗಿರೋದು, ಹೊರಗಿನವರ ಮಾತು ಕೇಳಿ ದೂರಾಗುವುದಲ್ಲ ಎಂಬುದನ್ನು ರಶ್ಮಿಕಾ ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದಾರೆ.

Must Read