ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ಟಾಕ್ ಶೋ ಎಂದೇ ಹೆಸರಾಗಿರುವ ‘ಕಾಫಿ ವಿತ್ ಕರಣ್’ ತನ್ನ ಕೊನೆಯ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಬಹಳ ವರ್ಷಗಳ ಹಿಂದೆ ಆರಂಭಿಸಿದ್ದ ಈ ಶೋ, ಇದುವರೆಗೆ ಯಶಸ್ವಿಯಾಗಿ ಎಂಟು ಸೀಸನ್‌ಗಳನ್ನು ಪೂರೈಸಿದೆ. ಈಗ ಒಂಬತ್ತನೇ ಸೀಸನ್ ಪ್ರಸಾರಕ್ಕೆ ಸಿದ್ಧವಾಗಿದ್ದು, ಅಚ್ಚರಿಯೆಂದರೆ ಇದು ಈ ಶೋನ ಕೊನೆಯ ಸೀಸನ್ ಆಗಿರಲಿದೆ ಎಂದು ಸ್ವತಃ ಕರಣ್ ಜೋಹರ್ ಘೋಷಿಸಿದ್ದಾರೆ.
ಈ ಹೊಸ ಸೀಸನ್‌ನ ಪ್ರೋಮೊ ಈಗಾಗಲೇ ಬಿಡುಗಡೆಗೊಂಡು ಕುತೂಹಲ ಮೂಡಿಸಿದೆ. ಪ್ರೋಮೊದಲ್ಲಿ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಕರಣ್ ಜೋಹರ್ ಜೊತೆ ಮಾತನಾಡುತ್ತಾ ಸಲ್ಮಾನ್, “ಈ ಶೋನಲ್ಲಿ ನಾನು ಬರುತ್ತಿದ್ದೇನೆ, ಎಲ್ಲರೂ ನೋಡಿ. ಇದು ಕೊನೆಯ ಸೀಸನ್, ಆ ನಂತರ ಏನಾಗುತ್ತದೆಯೋ ಗೊತ್ತಿಲ್ಲ” ಎಂದಿದ್ದಾರೆ. ಇದಕ್ಕೆ ಕರಣ್ ಜೋಹರ್ ಕೂಡ “ಹೌದು, ಇದು ಕೊನೆಯ ಸೀಸನ್, ಆಮೇಲೆ ಏನಾಗುತ್ತದೆಯೋ ಗೊತ್ತಿಲ್ಲ” ಎಂದಿದ್ದಾರೆ.
ಕರಣ್ ಜೋಹರ್ ಅವರ ಈ ಕಡೇ ಸೀಸನ್‌ನಲ್ಲಿ ಬಾಲಿವುಡ್‌ನ ಹಲವು ದಿಗ್ಗಜರು ಹಾಗೂ ಯಶಸ್ವಿ ತಾರೆಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ, ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಜಂಟಿಯಾಗಿ ಈ ಶೋನಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಆಲಿಯಾ ಭಟ್, ಶರ್ವರಿ ವಾಘ್, ಜಾನ್ಹವಿ ಕಪೂರ್, ಅನನ್ಯಾ ಪಾಂಡೆ, ಶಾಹಿದ್ ಕಪೂರ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಹಲವು ಸ್ಟಾರ್‌ಗಳು ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದ ರಹಸ್ಯಗಳನ್ನು ಬಿಚ್ಚಿಡಲಿದ್ದಾರೆ.
‘ಜಿಯೋ ಹಾಟ್‌ಸ್ಟಾರ್’ ಒಟಿಟಿ ವೇದಿಕೆಯಲ್ಲಿ ಅಕ್ಟೋಬರ್ 14ರಿಂದ ಈ ಹೊಸ ಹಾಗೂ ಅಂತಿಮ ಸೀಸನ್ ಅಧಿಕೃತವಾಗಿ ಪ್ರಸಾರಗೊಳ್ಳಲಿದೆ. ಹಲವು ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತ ಬಂದಿರುವ ಈ ಮನರಂಜನಾ ಕಾರ್ಯಕ್ರಮಕ್ಕೆ ಕೊನೆಯ ಬಾರಿಗೆ ತೆರೆಬೀಳುತ್ತಿರುವುದರಿಂದ, ಅಭಿಮಾನಿಗಳಲ್ಲಿ ಒಂದು ರೀತಿಯ ಭಾವನಾತ್ಮಕ ಕುತೂಹಲ ಮೂಡಿದೆ. ಮೊದಲ ಎಪಿಸೋಡ್‌ನಲ್ಲಿ ಸಲ್ಮಾನ್ ಖಾನ್ ಅವರ ಧಮಾಕ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.



