2027 ರ ಏಕದಿನ ವಿಶ್ವಕಪ್​​ಗೂ ಕೊಹ್ಲಿ, ರೋಹಿತ್ ಇರುತ್ತಾರೆ: ಗೌತಮ್ ಗಂಭೀರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಭಾರತ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ರೋಹಿತ್ ಮತ್ತು ಕೊಹ್ಲಿ ತಮ್ಮ ಎಲ್ಲ ಸಿದ್ಧತೆಗಳನ್ನು ನಡೆಸಲಿದ್ದಾರೆ, ಅದೇ ರೀತಿ 2025 ರ ಋತುವಿನ ನಂತರವೂ ಭಾರತ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಮುಂಚಿತವಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಗಂಭೀರ್, ಟಿ20 ವಿಶ್ವಕಪ್ ಅಥವಾ 50 ಓವರ್​ಗಳ ವಿಶ್ವಕಪ್ ಆಗಿರಲಿ, ದೊಡ್ಡ ವೇದಿಕೆಯಲ್ಲಿ ಯಾವ ಸಾಧನೆ ಮಾಡಬಹುದು ಎಂಬುದನ್ನು ಅವರು ತೋರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾನು ಸ್ಪಷ್ಟವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಆ ಇಬ್ಬರಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅದಕ್ಕಿಂತ ಮುಖ್ಯವಾಗಿ ಕೆಲವೇ ತಿಂಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಬರುತ್ತಿದೆ. ಆಸ್ಟ್ರೇಲಿಯಾದ ದೊಡ್ಡ ಪ್ರವಾಸವೂ ಮುಂದಿದೆ. ಅವರು ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಸಾಧ್ಯವಾದರೆ 2027 ರ ಏಕದಿನ ವಿಶ್ವಕಪ್​​ಗೂ ಇರುತ್ತಾರೆ ಎಂದು ಭಯಸುವೆ ಎಂದು ಹೇಳಿದ್ದಾರೆ.

ಅವರಲ್ಲಿ ಎಷ್ಟು ಪ್ರಮಾನದ ಕ್ರಿಕೆಟ್ ಸಾಮರ್ಥ್ಯ ಉಳಿದಿದೆ ಎಂದು ನಾನು ಹೇಳಲಾರೆ. ಅಂತಿಮವಾಗಿ, ಅದು ಅವರಿಗೆ ಬಿಟ್ಟದ್ದು. ತಂಡದ ಯಶಸ್ಸಿಗೆ ಅವರು ಎಷ್ಟು ಕೊಡುಗೆ ನೀಡಬಹುದು ಎಂಬುದನ್ನು ನಿರ್ಧರಿಸುವುದು ಆಟಗಾರರಿಗೆ ಬಿಟ್ಟದ್ದು. ಅಂತಿಮವಾಗಿ, ತಂಡವೇ ಮುಖ್ಯ. ವಿರಾಟ್ ಮತ್ತು ರೋಹಿತ್ ಏನು ನೀಡಬಲ್ಲರು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಅವರು ವಿಶ್ವ ದರ್ಜೆಯ ಆಟಗಾರರು. ತಂಡ ಸಾಧ್ಯವಾದಷ್ಟು ಕಾಲ ಅವರಿಬ್ಬರನ್ನು ಬಯಸುತ್ತದೆ ಎಂದು ಗಂಭೀರ್​ ಹೇಳಿದರು.

ಜಸ್ಪ್ರೀತ್ ಬುಮ್ರಾ ಅವರಂತಹವರಿಗೆ ಕೆಲಸದ ಹೊರೆ ನಿರ್ವಹಣೆ ಮುಖ್ಯ. ರೋಹಿತ್ ಮತ್ತು ವಿರಾಟ್ ಟಿ 20 ಪಂದ್ಯಗಳನ್ನು ಆಡುತ್ತಿಲ್ಲ. ಆದ್ದರಿಂದ ಅವರು ಪ್ರಮುಖ ಪಂದ್ಯಗಳಿಗೆ ಲಭ್ಯವಿರಬೇಕು. ಅವರು ಉತ್ತಮ ಕ್ರಿಕೆಟ್ ಆಡಲು ಮತ್ತು ಉತ್ತಮ ಫಾರ್ಮ್​ನಲ್ಲಿರಬೇಕು. ಬುಮ್ರಾಗೆ ಮಾತ್ರವಲ್ಲ, ಹೆಚ್ಚಿನ ಬೌಲರ್​ಗಳಿಗೆ ಕೆಲಸದ ಹೊರೆ ನಿರ್ವಹಣೆ ಮುಖ್ಯವಾಗಿದೆ ಎಂದು ಗಂಭೀರ್​ ಹೇಳಿದರು.

ಆಗಸ್ಟ್​ನಲ್ಲಿ ಶ್ರೀಲಂಕಾದಲ್ಲಿ ಪ್ರಾರಂಭವಾಗುವ 3 ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಮತ್ತು ಕೊಹ್ಲಿ ಇಬ್ಬರನ್ನೂ ಆಯ್ಕೆ ಮಾಡಲಾಗಿದೆ. ಗಂಭೀರ್ ಅವರ ಕೋರಿಕೆಯ ಮೇರೆಗೆ ಇಬ್ಬರು ಬ್ಯಾಟರ್​ಗಳು ಪ್ರವಾಸಿ ತಂಡದ ಭಾಗವಾಗಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. 3ಟಿ 20 ಮತ್ತು ಅಷ್ಟೇ ಏಕದಿನ ಪಂದ್ಯಗಳನ್ನು ಹೊಂದಿರುವ ಮುಂಬರುವ ಶ್ರೀಲಂಕಾ ಪ್ರವಾಸವು ತಂಡದ ಮುಖ್ಯ ಕೋಚ್ ಆಗಿ ಗಂಭೀರ್ ಅವರ ಮೊದಲ ನೇಮಕವಾಗಿದೆ.

ಅಭಿಷೇಕ್ ನಾಯರ್ ಮತ್ತು ರಯಾನ್ ಟೆನ್ ಡೊಸ್ಚಾಟೆ ಸಹಾಯಕ ತರಬೇತುದಾರರಾಗಿ ಅವರೊಂದಿಗೆ ಸೇರಲಿದ್ದಾರೆ ಎಂದು ಗಂಭೀರ್ ಸೋಮವಾರ ಖಚಿತಪಡಿಸಿದ್ದಾರೆ. ಟಿ ದಿಲೀಪ್ ಮತ್ತು ಸಾಯಿರಾಜ್ ಬಹುತುಲೆ ಕೂಡ ಶ್ರೀಲಂಕಾ ಪ್ರವಾಸಕ್ಕಾಗಿ ಅವರ ಕೋಚಿಂಗ್ ಸಿಬ್ಬಂದಿಯ ಭಾಗವಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!