ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿಸಿ ಮದುವೆಯಾದ ಜೋಡಿಯೊಂದು ಮದುವೆಯೇ ದಿನವೇ ದುರಂತ ಅಂತ್ಯ ಕಂಡಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು-ವರರಿಬ್ಬರು ಪರಸ್ಪರ ಹೊಡೆದಾಡಿಕೊಂಡಿರೋ ಘಟನೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಕೆಲವು ಅಂಶಗಳು ಬಯಲಾಗಿದೆ.
ಲಿಖಿತಶ್ರೀ (20) ಹಾಗೂ ನವೀನ್ (29) ಮೃತ ದುರ್ದೈವಿಗಳು. ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದ ನವೀನ್, ಬೈನಪಲ್ಲಿಯ ಲಿಖಿತಶ್ರೀ ಪ್ರೀತಿಸಿ ಎರಡೂ ಕುಟುಂಬದವರನ್ನು ಒಪ್ಪಿಸಿ ನಿನ್ನೆ ಮದುವೆಯಾಗಿದ್ದರು. ಮದುವೆಯಾದ ನಂತರ ಇಬ್ಬರು ಒಂದು ರೂಮ್‌ಗೆ ತೆರಳಿದ್ದು, ಅಲ್ಲಿ ಮಾತಿಗೆ ಮಾತು ಬೆಳೆಸಿದ್ದಾರೆ. ಇದು ಅತಿರೇಖಕ್ಕೆ ಹೋಗಿ ಹೊಡೆದಾಟ ಆರಂಭವಾಗಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ಆಸ್ಪತ್ರೆಗೆ ಇಬ್ಬರನ್ನೂ ದಾಖಲಿಸಲಾಗಿದ್ದು, ಲಿಖಿತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆಂದು ವರನನ್ನು ರಾತ್ರಿ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನವೀನ್ ಮೃತಪಟ್ಟಿದ್ದಾನೆ.
ಲಿಖಿತಾಶ್ರೀ ಬಲ ಅಂಗೈ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ವರ ನವೀನ್ ತಲೆಯ ನೆತ್ತಿಯ ಭಾಗ ಹಾಗೂ ತಲೆಯ ಹಿಂಭಾಗಕ್ಕೆ ಮಚ್ಚಿನಿಂದ ಹೊಡೆದ ಗಾಯಗಳಾಗಿವೆ. ಮೊದಲು ಲಿಖಿತಶ್ರೀ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ನಂತರ ತಾನೂ ತಲೆಗೆ ಮಚ್ಚಿನಿಂದ ಹೊಡೆದುಕೊಂಡಿದ್ದಾನೆ ಎಂಬ ಶಂಕೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವ್ಯಕ್ತವಾಗಿದೆ. ಲಿಖಿತಶ್ರೀ ನವೀನ್ ಮೇಲೆ ಹಲ್ಲೆ ಮಾಡಿಲ್ಲ ಅನ್ನೋದು ಸ್ಪಷ್ಟವಾಗಿದೆ. ಇಬ್ಬರಿಗೂ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಒಬ್ಬರೂ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಸದ್ಯ ಕೋಲಾರ ಜಿಲ್ಲೆ ಕೆಜಿಎಫ್ ಆ್ಯಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ದ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಈ ಜಗಳದಲ್ಲಿ ಮೂರನೇ ವ್ಯಕ್ತಿ ಇದ್ದರಾ ಎನ್ನುವ ಆಯಾಮದಲ್ಲಿ ತನಿಖೆಯಾಗಿದ್ದು, ಇಬ್ಬರ ಮೊಬೈಲ್‌ಫೋನ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.