ಕೊಲ್ಕತ್ತಾ ಕೇಸ್: ವೈದ್ಯಕೀಯ ಸಿಬ್ಬಂದಿ, ಮಹಿಳೆಯರ ರಕ್ಷಣೆಗೆ ಮುಂದಾದ ಕರ್ನಾಟಕ ಅರೋಗ್ಯ ಇಲಾಖೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಕರ್ನಾಟಕ ಆರೋಗ್ಯ ಇಲಾಖೆ, ವೈದ್ಯಕೀಯ ಸಿಬ್ಬಂದಿ ಮತ್ತು ಮಹಿಳೆಯರ ರಕ್ಷಣೆಗೆ ಮುಂದಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಭದ್ರತೆ, ಭರವಸೆ ಮೂಡಿಸಲು ಇಂದು ವಿಧಾನಸೌಧದಲ್ಲಿ ಸಚಿವ ದಿನೇಶ್ ಗುಂಡೂರಾವ್​ ಅವರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಟಾಸ್ಕ್​ಫೋರ್ಸ್ ತಂಡ ರಚಿಸಲು ತೀರ್ಮಾನಿಸಲಾಗಿದೆ.

ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ವಿಶೇಷವಾಗಿ ಮಹಿಳೆಯರ ಮೇಲೆ ಆಗುತ್ತಿರುವ ಕೃತ್ಯದಿಂದಾಗಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ಮಹಿಳೆಯರೇ ಎಲ್ಲ ಕಡೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಭದ್ರತೆ ನೀಡಬೇಕಿದೆ. ಕರ್ತವ್ಯ ನಿರತ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಭದ್ರತೆ ಹೆಚ್ಚಿಸುವ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಭದ್ರತೆ, ಭರವಸೆ ಮೂಡಿಸುವ ನಿಟ್ಟಿನಲ್ಲಿ IMA, Phana, ಖಾಸಗಿ ವೈದ್ಯಕೀಯ ಅಸೋಸಿಯೇಷನ್, ಆಯುಷ್ ಸೇರಿದಂತೆ 12 ಸಂಘಟನೆಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಮಹಿಳೆಯರ ಭದ್ರತೆಗೆ ಸಿಸಿಟಿವಿ, ಎಮರ್ಜೆನ್ಸಿ ಕಾಲ್, ಪ್ಯಾನಿಕ್ ಬಟನ್, ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ. ಕಾನೂನುಗಳನ್ನು ಅಧ್ಯಯನ ಮಾಡಿ ಅದರ ಜೊತೆಗೆ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಇನ್ನೊಂದು ತಿಂಗಳಲ್ಲೇ ಟಾಸ್ಕ್ ಫೋರ್ಸ್ ಟೀಂ ರಚನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!