ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್ನ ಖ್ಯಾತ ಕಲಾ ನಿರ್ದೇಶಕ ಮಿಲನ್ ಫರ್ನಾಂಡಿಸ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 54 ವರ್ಷ ವಯಸ್ಸಾಗಿತ್ತು. ಮಾಗಿಜ್ ತಿರುಮೇನಿ ನಿರ್ದೇಶನದ, ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ ಮುಖ್ಯಭೂಮಿಕೆಯ ‘ವಿದಾ ಮುಯಾರ್ಚಿ’ ಚಿತ್ರದ ಶೂಟಿಂಗ್ ಅಜರ್ಬೈಜಾನ್ನಲ್ಲಿ ನಡೆಯುತ್ತಿತ್ತು.ಇಲ್ಲಿಗೆ ಚಿತ್ರೀಕರಣಕ್ಕೆಂದು ತೆರಳುತ್ತಿದ್ದಾಗ ಮಾರ್ಗಮಧ್ಯೆ ಹೃದಯಾಘಾತವಾಗಿದೆ.
ಜನಪ್ರಿಯ ಮಲಯಾಳಂ ನಟ ಪ್ರೇಮ್ ಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಿಲನ್ ಫರ್ನಾಂಡಿಸ್ ನಿಧನವನ್ನು ಖಚಿತಪಡಿಸಿದ್ದಾರೆ. ‘ನಿಜಕ್ಕೂ ಶಾಕಿಂಗ್ ವಿಚಾರ. ಕಲಾ ನಿರ್ದೇಶಕ ಮಿಲನ್ ಫರ್ನಾಂಡಿಸ್ ಸರ್ ಇನ್ನಿಲ್ಲ. ತುಂಬಾ ಶಾಂತ ಸ್ವಭಾವದ ವ್ಯಕ್ತಿ. ನನಗಿವರು ‘ತುನಿವು’ ಸಿನಿಮಾ ಸೆಟ್‌ನಿಂದ ಪರಿಚಯ. ನೀವು ತುಂಬಾ ಬೇಗ ಹೋದಿರಿ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಈ ಘಟನೆಯು ಅಜರ್ಬೈಜಾನ್ನಲ್ಲಿ ನಡೆಯುತ್ತಿರುವ ‘ವಿದಾ ಮುಯಾರ್ಚಿ’ ಚಿತ್ರದ ಶೂಟಿಂಗ್ ಸಮಯದಲ್ಲಿ ಸಂಭವಿಸಿದೆ’ ಎಂದು ತಿಳಿಸಿದ್ದಾರೆ.
ಗಣ್ಯರಿಂದ ಸಂತಾಪ: ಮಿಲನ್ ಫರ್ನಾಂಡಿಸ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಿಲನ್ ಫರ್ನಾಂಡಿಸ್ ಚೆನ್ನೈನಲ್ಲಿ ಜನಿಸಿದರು. 1999ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಪ್ರಸಿದ್ಧ ಕಲಾ ನಿರ್ದೇಶಕ ಸಾಬು ಸಿರಿಲ್ ಅವರೊಂದಿಗೆ ಕೆಲಸ ಮಾಡಿದರು. ಅಜಿತ್ ಕುಮಾರ್ ಅವರ ಸಿಟಿಜನ್ (2001), ದಳಪತಿ ವಿಜಯ್ ನಟನೆಯ ತಮಿಳಿಯನ್ (2002), ಅಜಿತ್ ಅವರ ರೆಡ್ (2002), ವಿಲನ್ (2002), ಚಿಯಾನ್ ವಿಕ್ರಮ್ ಅವರ ಅನ್ನಿಯನ್ (2005) ಈ ಚಿತ್ರಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.
‘ಕಲಬ ಕಾದಲನ್’ ಚಿತ್ರದ ಮೂಲಕ ಸ್ವತಂತ್ರ ಕಲಾ ನಿರ್ದೇಶಕರಾಗಿ ಬಡ್ತಿ ಪಡೆದರು. 2007ರಲ್ಲಿ ತೆರೆ ಕಂಡ ‘ಓರಂ ಪೊ’ ಚಿತ್ರದಲ್ಲಿ ಕೆಲಸ ಮಾಡಿದರು. ಮಿಲನ್ ಫರ್ನಾಂಡಿಸ್ ಈವರೆಗೆ ಒಟ್ಟು 30ಕ್ಕೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಜಿತ್ ಕುಮಾರ್ ಅಭಿನಯದ ಹಲವಾರು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿದ್ದಾರೆ.