ಕೊಪ್ಪಳ: ಅನೈತಿಕ ಚಟುವಟಿಕೆಗಳ ತಾಣವಾದ ಅಂಬೇಡ್ಕರ್ ಭವನ

ಹೊಸದಿಗಂತ ವರದಿ, ಕೊಪ್ಪಳ:
ಜಿಲ್ಲಾಡಳಿತ ಕಚೇರಿ ಕೂಗಳತೆ ದೂರದಲ್ಲಿರುವ ಅಂಬೇಡ್ಕರ್ ಭವನವು ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ನಿರ್ಮಾಣವಾಗಿ ತಿಂಗಳುಗಳೇ ಕಳೆದರೂ ಲೋಕಾರ್ಪಣೆ ಭಾಗ್ಯವಿಲ್ಲದೆ ಭವನ ಪಾಳುಬಿದ್ದಿದೆ.
ಶ್ರೀನಗರ ಕಾಲೋನಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 2014-15ನೇ ಪರಿಶಿಷ್ಟ ಜಾತಿ ಉಪಯೋಜನೆಯಡಿ ಕೆಆರ್‌ಎಡಿಎಲ್ ನಿಂದ 99.95 ಲಕ್ಷ ರೂ. ಅನುದಾನದಲ್ಲಿ ಭವನ ನಿರ್ಮಾಣವಾಗಿದೆ. ಆದರೆ, ಮಾರ್ಚ್ ತಿಂಗಳಲ್ಲೇ ಪೂರ್ಣಗೊಂಡರೂ ಇನ್ನೂ ಉದ್ಘಾಟನೆ ಭಾಗ್ಯವಿಲ್ಲ.
ಅಂಬೇಡ್ಕರ್ ಭವನ ಲೋಕಾರ್ಪಣೆ ಮುನ್ನವೇ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಪುಡಿ ಮಾಡಿದ್ದಾರೆ. ಪ್ರಸ್ತುತ ಹಗಲು-ರಾತ್ರಿ ಭವನವು ಬಾರ್ ಆ್ಯಂಡ್ ರೆಸ್ಟೋರೆಂಟ್ ನಂತೆ ಕಾರ್ಯಾಚರಿಸುತ್ತಿದೆ. ಭವನದಲ್ಲಿ ಒಂದು ಕೋಣೆಯ ಬಾಗಿಲು ತೆರದಿದ್ದು, ಕೆಲವರು ರಾತ್ರಿ ವೇಳೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿಕೊಂಡಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಂತೂ ಇತ್ತಕಡೆ ತಲೆಯೂ ಹಾಕುತ್ತಿಲ್ಲ. ಇದರಿಂದ ಕಿಡಿಗೇಡಿಗಳಿಗೆ ಅಡ್ಡೆಯಾಗಿ ಮಾರ್ಪಟ್ಟಿದೆ.
ಭವನಕ್ಕಿಲ್ಲ ಕಾಂಪೌಂಡ್ ವ್ಯವಸ್ಥೆ:
ಭವನ ನಿರ್ಮಾಣ ಅಪೂರ್ಣವಾಗಿದ್ದು, ಕಾಂಪೌಂಡ್ ಕಟ್ಟಿಲ್ಲ. ಹಗಲು ರಾತ್ರಿಯನ್ನದೇ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಭವನದ ಮೊದಲನೇ ಮಹಡಿ ಕಾಮಗಾರಿ ನಿಂತಿದೆ. ಸುತ್ತಲೂ ಗಿಡ ಬೆಳೆದಿದ್ದು, ಸ್ವಚ್ಛತೆ ಇಲ್ಲದಂತಾಗಿದೆ. ಭವನವು ಲೋಕಾರ್ಪಣೆ ಗೊಂಡು ಎಸ್ಸಿ ಜನಾಂಗಕ್ಕೆ ಮೀಸಲಾಗುವ ಬದಲು ಕಿಡಿಗೇಡಿಗಳಿಗೆ ಅಡ್ಡೆಯಾಗಿದೆ. ಸಾರ್ವಜನಿಕರ ತೆರಿಗೆ ಹಣವು ಎಸ್ಸಿ ಜನಾಂಗಕ್ಕೆ ಉಪಯೋಗವಾಗದೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪೋಲಾಗಿದೆ.
ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು:
ಭವನದ ಒಂದು ಕೊಠಡಿಯ ಬಾಗಿಲು ತೆರದಿದ್ದು, ಮದ್ಯದ ಬಾಟಲಿಗಳು ಬಿದ್ದಿವೆ. ಭವನ ಪಕ್ಕದಲ್ಲಿ ನೂರಾರು ಬಾಟಲಿಗಳು ಚೀಲಗಳಲ್ಲಿ ತುಂಬಿ ಇಡಲಾಗಿದೆ. ಕಿಡಿಗೇಡಿಗಳು ಬಾಟಲಿಗಳನ್ನು ಒಡೆದಿದ್ದು, ಎಲ್ಲೆಂದರಲ್ಲಿ ಗಾಜುಗಳು ಬಿದ್ದಿವೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ವಾರದ ಹಿಂದೆಯಷ್ಟೇ ಭೇಟಿ ನೀಡಿರುವುದಾಗಿ ತಿಳಿಸಿದ್ದು, ಅಕ್ರಮ ಚಟುವಟಿಕೆ ಕಂಡು ಬಂದರೂ, ಏಕೆ ಸುಮ್ಮನಿದ್ದಾರೆ? ಕಿಡಿಗೇಡಿಗಳ ಪರವಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!