July 14, 2026
Tuesday, July 14, 2026
spot_img

ಮಾಲಿನ್ಯ ತಡೆಗೆ ಕೊಪ್ಪಳ ಜಿಲ್ಲಾಡಳಿತ ಖಡಕ್ ಆಕ್ಷನ್; ಕಲ್ಯಾಣಿ ಸ್ಟೀಲ್ಸ್ ಸೀಜ್, ವಿದ್ಯುತ್ ಕಡಿತಕ್ಕೆ ಡಿಸಿ ಸುರೇಶ್ ಇಟ್ನಾಳ್ ಸೂಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಿರಂತರವಾಗಿ ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಕೊಪ್ಪಳ ಜಿಲ್ಲೆಯ ಜಿನ್ನಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಪ್ರಸಿದ್ಧ ‘ಕಲ್ಯಾಣಿ ಸ್ಟೀಲ್ಸ್’ ಕಾರ್ಖಾನೆಯನ್ನು ಸೀಜ್ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಈ ಕಠಿಣ ಆದೇಶದ ಬೆನ್ನಲ್ಲೇ ಜಿಲ್ಲಾಡಳಿತವು ಕಾರ್ಖಾನೆಗೆ ಬೀಗ ಜಡಿದಿದೆ.

ವಿದ್ಯುತ್ ಕಡಿತಕ್ಕೆ ಡಿಸಿ ಆದೇಶ

ಕಲ್ಯಾಣಿ ಸ್ಟೀಲ್ಸ್ ಕಾರ್ಖಾನೆಯು ದೀರ್ಘಕಾಲದಿಂದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿ ಪರಿಸರಕ್ಕೆ ಹಾನಿ ಮಾಡುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಗಂಭೀರವಾಗಿ ಪರಿಗಣಿಸಿದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಯನ್ನು ತಕ್ಷಣವೇ ಮುಚ್ಚುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೇಂದ್ರದ ಆದೇಶ ಜಾರಿಗೆ ತಂದಿರುವ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಕಾರ್ಖಾನೆಗೆ ಸರಬರಾಜಾಗುತ್ತಿದ್ದ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸುವಂತೆ ಜೆಸ್ಕಾಮ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಜಿಲ್ಲೆಯಲ್ಲಿ ಸೀಜ್ ಆದ 4ನೇ ಬೃಹತ್ ಕಾರ್ಖಾನೆ!

ಕೊಪ್ಪಳ ಜಿಲ್ಲೆಯಲ್ಲಿ ಮಾಲಿನ್ಯಕಾರಕ ಕೈಗಾರಿಕೆಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಹಮ್ಮಿಕೊಂಡಿರುವ ದೊಡ್ಡ ಕಾರ್ಯಾಚರಣೆ ಇದಾಗಿದ್ದು, ಪರಿಸರ ಮಾಲಿನ್ಯ ನಿಯಮ ಉಲ್ಲಂಘನೆಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳ ಅವಧಿಯಲ್ಲಿ ಸೀಜ್ ಆಗುತ್ತಿರುವ ನಾಲ್ಕನೇ ಅತಿ ದೊಡ್ಡ ಕಾರ್ಖಾನೆ ಇದಾಗಿದೆ. ಗಂಗಾವತಿ ಹಾಗೂ ಕೊಪ್ಪಳ ಭಾಗದ ರೈತರು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಪರಿಸರ ಸಂರಕ್ಷಣೆಗೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದನ್ನೂ ಓದಿ:

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿಗಳ ಪ್ರಕಾರ ಆಧುನಿಕ ಮಾಲಿನ್ಯ ನಿಯಂತ್ರಣ ಉಪಕರಣಗಳನ್ನು ಅಳವಡಿಸಿ, ದಂಡ ಪಾವತಿಸುವವರೆಗೂ ಕಲ್ಯಾಣಿ ಸ್ಟೀಲ್ಸ್ ಕಾರ್ಖಾನೆಯ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !