ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಿತ್ರದುರ್ಗ ತತ್ತರಿಸಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಾಗೂ ಸುತ್ತಮುತ್ತಲ ಪ್ರದೇಶಗಳು ರಾತ್ರಿಯಿಡೀ ಜಲಾವೃತಗೊಂಡಿದ್ದರಿಂದ ತೀವ್ರ ತೊಂದರೆ ಎದುರಾಯಿತು.
ನಾಯಕನಹಟ್ಟಿಯ ಚಿಕ್ಕಕೆರೆಯಿಂದ ನೀರು ಹರಿದು ಬಂದಿದೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆಗೆ ನೀರು ನುಗ್ಗಿದ್ದು, ಠಾಣೆ ಕೆರೆಯಂತಾಗಿದೆ. ಇದರಿಂದ ಅಕ್ಷರಶಃ ಪೋಲೀಸ್ ಠಾಣೆ ಕಟ್ಟಡ ನೀರಿನಿಂದ ತುಂಬಿಕೊಂಡಿದೆ. ಇದಲ್ಲದೆ ಮನೆ, ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿದೆ. ಇದರೊಂದಿಗೆ ಹೊರಮಠದ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನವೂ ಮುಳುಗಡೆಯಾಗಿದೆ. ಸೋಮವಾರ ರಾತ್ರಿ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಟ್ರ್ಯಾಕ್ಟರ್ ಕೊಚ್ಚಿ ಹೋಗಿದೆ.
ಮಳೆಯ ನೀರಿನಿಂದ ಠಾಣೆಯಲ್ಲಿ ಮೊಳಕಾಲುದ್ದ ನೀರು ನಿಂತಿತ್ತು. ಹೀಗಾಗಿ ನೀರು ನುಗ್ಗಿದ್ದರಿಂದ ಕಚೇರಿಯೊಳಗಿನ ದಾಖಲೆಗಳನ್ನು ರಕ್ಷಿಸಲು ಪೊಲೀಸರಿಗೆ ತೊಂದರೆಯಾಯಿತು. ದೇವರಹಟ್ಟಿಗೆ ತೆರಳುತ್ತಿದ್ದ ನಾಲ್ಕು ಜನರಿದ್ದ ಕಾರು ನಾಯಕನಹಟ್ಟಿ ಗ್ರಾಮದ ಬಳಿ ಕೊಚ್ಚಿ ಹೋಗಿದೆ. ಆದರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಅಪಾಯದಿಂದ ಪಾರಾಗಿದ್ದಾರೆ.