ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಸೇಡಮ್ ರಸ್ತೆಯ ಬೀರನಳ್ಳಿಯ ಪ್ರಕೃತಿ ನಗರದಲ್ಲಿ ೯ ದಿನಗಳ ಕಾಲ ನಡೆಯಲಿರುವ ಕೊತ್ತಲ ಸ್ವರ್ಣ ಜಯಂತಿ ಹಾಗೂ ೭ನೇ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಮಂಗಳವಾರ ಕಲಬುರಗಿ ಹಾಗೂ ಸೇಡಮ್ ನಲ್ಲಿ ಅದ್ಧೂರಿಯಾಗಿ ಶೋಭಾಯಾತ್ರೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ ಆರಂಭಗೊಂಡ ಅದ್ಧೂರಿ ಶೋಭಾಯಾತ್ರೆ ಗಂಜ್ ಪ್ರದೇಶದ ಅವಿನಾಶ್ ಪೆಟ್ರೋಲ್ ಬಂಕ್, ಸುಪರ್ ಮಾರ್ಕೆಟ್, ಜನತಾ ಬಜಾರ್, ಸಿಟಿ ಸೆಂಟರ್ ಮಾಲ್,ಜಗತ್ ವೃತ್ತದ ಮೂಲಕ ನೂತನ ವಿದ್ಯಾಲಯದ ಮೈದಾನದಲ್ಲಿ ಸಂಪನ್ನಗೊಂಡಿತು.
ಶೋಭಾಯಾತ್ರೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು,ಡೊಳ್ಳು ಕುಣಿತ,ಗಿಗಿ ಪದ,ಭಜನೆ, ಕೋಲಾಟ, ನೃತ್ಯ ಪ್ರದರ್ಶನ, ಗೊಂದಳಿ ಆಟ, ಪುರಂತರ ತಂಡ ಸೇರಿದಂತೆ ಹಲವು ಕಲಾ ತಂಡಗಳು ಐತಿಹಾಸಿಕ ಶೋಭಾಯಾತ್ರೆಗೆ ಮೆರುಗು ತಂದವು.
ಭಾರತೀಯ ಸಂಸ್ಕೃತಿ ಉತ್ಸವದ ಅದ್ಧೂರಿ ಶೋಭಾಯಾತ್ರೆಗೆ ಮಾಜಿ ಮುಖ್ಯಮಂತ್ರಿ,ಸಂಸದ ಜಗದೀಶ್ ಶೆಟ್ಟರ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೆರ್ ಪರ್ಸನ್ ಡಾ.ದಾಕ್ಷಾಯಿಣಿ ಎಸ್ ಅಪ್ಪಾ, ಶಾಸಕ ಬಸವರಾಜ ಮತ್ತಿಮಡು, ಕಾರ್ಯದರ್ಶಿ ಬಸವರಾಜ ದೇಶಮುಖ, ಹರ್ಷಾನಂದ ಗುತ್ತೇದಾರ್, ನಿತೀನ್ ಗುತ್ತೇದಾರ್, ಮಾರ್ಥಾಂಡ ಶಾಸ್ತ್ರಿ ಸೇರಿದಂತೆ ಹಲವು ಪ್ರಮುಖರು ಚಾಲನೆ ನೀಡಿದರು.
ನಗರದ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳು,ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶೋಭಾಯಾತ್ರೆ ಮೆರವಣಿಗೆಯಲ್ಲಿ ದೇಶಭಕ್ತಿ ಗೀತೆಗಳ,ನಾಡಿನ ಮಹಾನ ವ್ಯಕ್ತಿಗಳ ಕುರಿತು ನೃತ್ಯ ಪ್ರದರ್ಶನ ನಡೆಸಿದರು. ಶೋಭಾಯಾತ್ರೆಯಲ್ಲಿ ಭಾಗಿಯಾದ ಎಲ್ಲಾ ಶಿಕ್ಷಣ ಸಂಸ್ಥೆಗಳ, ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಬಾಳೆಹಣ್ಣು,ಬ್ರೆಡ್,ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.