ಹೊಸದಿಗಂತ ವರದಿ, ಮಂಗಳೂರು:
ಒಂದೆಡೆ ಊರಿ ಬಿಸಿಲು,ಮತ್ತೊಂದೆಡೆ ಕಾದ ಕಾವಲಿನಂತಾದ ಬೃಹತ್ ಬಂಡೆ,ನೇರ ಆಕಾಶದತ್ತ ಮುಖ ಮಾಡಿರುವ ಬಂಟ್ವಾಳ ತಾಲೂಕಿನ ಪುರಾಣಪ್ರಸಿದ್ದ ಕಾರಿಂಜಕ್ಷೇತ್ರದ 350 ಮೀ.ಎತ್ತರದ ಬೆಟ್ಟವನ್ನು ಏರುವುದು ಸುಲಭದ ಮಾತಲ್ಲ…ಆದರೆ ಕರ್ನಾಟಕದ “ಸ್ಪೆಡರ್ ಮ್ಯಾನ್”ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಆಲಿಯಾಸ್ ಕೋತಿರಾಜ್ ಅವರು ಕೇವಲ ಆರ್ಧತಾಸಿನಲ್ಲಿ ಸಲೀಸಾಗಿ ಏರುವ ಮೂಲಕ ನೆರೆದ ಜನರ ಗಮನಸೆಳೆದರು.
ಭಾನುವಾರಬೆಳಗ್ಗೆ ಸುಮಾರು 10 ಗಂಟೆ ಹೊತ್ತಿಗೆ ಕಾರಿಂಜ ಬಂಡೆಯನ್ನು ಅರ್ಧ ತಾಸಿನಲ್ಲೇ ಸರಸರನೇ ಏರುವ ಮೂಲಕ ಸಾಹಸಗೈದು ದಾಖಲೆ ಬರೆದಿದ್ದಲ್ಲದೆ ನೆರದಿದ್ದ ಜನರನ್ನು ಕೂಡ ಒಂದುಕ್ಷಣ ಹುಬ್ಬೇರಿಸುವಂತೆ ಮಾಡಿದರು.
ರಾಜ್ಯದ ಅತ್ಯಂತ ಪ್ರಾಚೀನ ಶಿವಾಲಯವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರವು ಸಮುದ್ರಮಟ್ಟದಿಂದ 1200 ಅಡಿ ಎತ್ತರವಿದ್ದು, 800 ಅಡಿಗಳ ಎತ್ತರದಲ್ಲಿ ಏಕೈಕ ಶಿಲೆಯ ಮೇಲೆ ದೇಗುಲವಿದೆ. ಸುತ್ತಲೂ ಬೃಹದಾಕಾರದ ಕಲ್ಲುಬಂಡೆಗಳು, ಕ್ಷೇತ್ರದ ದಕ್ಷಿಣ ಭಾಗಕ್ಕೆ ಹಬ್ಬಿರುವ ಬೃಹತ್ ಕೊಡ್ಯಮಲೆ ಅರಣ್ಯ, ಚಾರಣ ಪ್ರಿಯರಿಗೆ ಇದು ಅತ್ಯಂತ ನೆಚ್ಚಿನ ತಾಣವು ಆಗಿದೆ. ಇದೊಂದು ಪ್ರವಾಸಿ ಗಿರಿಧಾಮವಾಗಿದ್ದು ಪ್ರವಾಸಿಗರನ್ನು ಬಹುದೂರದಿಂದಲೇ ತನ್ನತ್ತ ಸೆಳೆಯುತ್ತದೆ.
ಜ್ಯೋತಿರಾಜ್ ಅವರು ಈ ಬೃಹತ್ ಬಂಡೆಯನ್ನು ಏರುವ ಸವಾಲು ತೆಗೆದುಕೊಂಡಿದ್ದು, ಭಾನುವಾರ ಬೆಳಗ್ಗೆ ದೇವಸ್ಥಾನದ ಹಿಂಭಾಗದಿಂದ ಏರಿದರು. ಆರಂಭದಲ್ಲಿ ರೋಪ್ ಸಹಾಯದಿಂದ ಮೇಲೇರಿದ ಅವರು ಅರ್ಧದ ಬಳಿಕ ಬರಿಗೈಯಲ್ಲಿ ತನ್ನ ಸಾಹಸ ಪ್ರದರ್ಶಿಸಿ ನೆರೆದವರನ್ನು ರೋಮಾಂಚನಗೊಳಿಸಿದರು. ಬೆಳಗ್ಗೆ ಸುಮಾರು 10 ಗಂಟೆಗೆ ಹತ್ತಲು ಆರಂಭಿಸಿದ ಅವರು ಅರ್ಧ ಗಂಟೆಯಲ್ಲಿ 350 ಮೀ.ಎತ್ತರವನ್ನು ನಿರಾಯಾಸವಾಗಿ ಏರಿ ಮೇಲ್ಬಾಗದಲ್ಲಿ ಕಾರಿಂಜೇಶ್ವರನ ಸನ್ನಿಧಿ ತಲುಪಿದರು.
ನೋಡುಗರ ಮೈಜುಮ್ಮೆನಿಸುವ ರೀತಿಯಲ್ಲಿ ಸುಡು ಬಿಸಿಲಿಗೆ ಅವರು ಬೆಟ್ಟವನ್ನು ಏರುವ ದೃಶ್ಯ ಕೆಲವರ ಕಣ್ಣುಗಳನ್ನು ಒದ್ದೆಯಾಗಿಸಿತು. ಬಿಸಿಲಿನ ತಾಪಕ್ಕೆ ಕಾದು ಸುಡುವ ಕಲ್ಲಿನ ಮೇಲೆ ಏರುವ ಅವರ ಸಾಹಸಕ್ಕೆ ಕಾರಿಂಜದಲ್ಲಿ ನೆರೆದ ನೂರಾರು ಜನರು ಹರ್ಷೋದ್ಘಾರ ವ್ಯಕ್ತಪಡಿಸಿ ಜೈಕಾರ ಹಾಕಿ ಬೆಂಬಲ ವ್ಯಕ್ತಪಡಿಸಿದರು.
ಬೆಟ್ಟದ ಕೆಳಗೆ ಭಗವದ್ವಜವನ್ನಿತ್ತು ಅವರ ಸಾಹಸಕ್ಕೆ ಚಾಲನೆ ನೀಡಲಾಯಿತು. ಕೊನೆಯಲ್ಲಿ ಅವರು ಭಗವಧ್ವಜ ಹಾಗೂ ಕನ್ನಡ ಬಾವುಟ ಹಾರಿಸಿ ಸಂಭ್ರಮಿಸಿದರು. ಇದರೊಂದಿಗೆ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿತು. ಬಳಿಕ ಶ್ರೀ ಕಾರಿಂಜೇಶ್ವರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.