ಕೊಡಗು ವಿವಿ ವಿಲೀನ ಪ್ರಸ್ತಾಪ ಕೈಬಿಡದಿದ್ದಲ್ಲಿ ಉಗ್ರ ಪ್ರತಿಭಟನೆ: ದೀಪಾ ಪೂಜಾರಿ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ವಿಶ್ವವಿದ್ಯಾಲಯವನ್ನು ಮತ್ತೊಂದು ವಿವಿಯೊಂದಿಗೆ ವಿಲೀನ ಮಾಡುವ ರಾಜ್ಯ ಸರಕಾರದ ಚಿಂತನೆಯು ಕೊಡಗು ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳನ್ನು ಕಸಿದುಕೊಂಡತಾಗುತ್ತದೆ. ಹಾಗೇನಾದರೂ ಈ ಸರ್ಕಾರ ವಿಲೀನಕ್ಕೆ ಮುಂದಾದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ರಾಜ್ಯ ಸಂಚಾಲಕಿ ದೀಪಾ ಪೂಜಾರಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಮಂಗಳೂರು ವಿಶ್ವವಿದ್ಯಾನಿಲಯದೊಂದಿಗೆ ವಿಲೀನ ಮಾಡಿ, ಕೊಡಗು ಭಾಗದ ಸ್ನಾತಕೋತ್ತರ ಕೇಂದ್ರ ಸೇರಿದಂತೆ ಇಲ್ಲಿನ ಕಾಲೇಜಿನ ನಿರ್ವಹಣೆಗಾಗಿ ಎರಡು ಕೋಟಿ ಹಣವನ್ನು ಮೀಸಲಿಡುವುದರಿಂದ, ಮಂಗಳೂರು ವಿಶ್ವವಿದ್ಯಾನಿಲಯದ ಈಗಿನ ಆರ್ಥಿಕ ಪರಿಸ್ಥಿತಿಯ ಸಂದರ್ಭದಲ್ಲಿ ಯಾವ ಬಗೆಯ ಪ್ರೋತ್ಸಾಹ ದೊರೆಯಬಹುದು ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದಿಂದ ಆ ಎರಡು ಕೋಟಿ ಹಣವನ್ನು ಕೊಡಗು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ನೀಡಿದರೆ ಈಗಿನ ಬೆಳವಣಿಗೆಯ ಜೊತೆಗೆ ಉತ್ತಮ ನಿರ್ವಹಣೆ ಹೊಂದಲು ಮತ್ತಷ್ಟು ಪೂರಕವಾಗಲಿದೆ. ಸ್ವತಂತ್ರ ನಿರ್ವಹಣೆಗೆ ಅವಕಾಶ ಇರುವಾಗ ವಿಲೀನವಾಗಿಸುವ ಮೂಲಕ ಅಧೀನಕ್ಕೊಳಪಡಿಸಲು ಮುಂದಾಗುತ್ತಿರುವುದೇಕೆ? ಇದರಿಂದ ಈ ಭಾಗದ ಮಕ್ಕಳಿಗೆ ಶೈಕ್ಷಣಿಕ ಹಕ್ಕುಗಳನ್ನು ಕಸಿದುಕೊಡಂತಾಗುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಇದು ನಿಜವಾಗಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.

ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಸಂವಿಧಾನದ ಹಕ್ಕುಗಳಲ್ಲೊಂದು. ಅಂತಹ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗುತ್ತಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು. ಕೊಡಗು ಜಿಲ್ಲೆಯ ಅಸ್ಮಿತೆಯ ಅಳಿವು ಉಳಿವಿನ ಪ್ರಶ್ನೆಯಾಗಿರುವ ಕೊಡಗು ವಿಶ್ವವಿದ್ಯಾಲಯದ ವಿಲೀನ ಮಾಡುವಂತಹ ಚಿಂತನೆಯನ್ನು ಕೈಬಿಡದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!