ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಕೋವಿಡ್-19 ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಗ್ಯ ವಿಚಾರಣೆ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಸಂಜೆ 4.30ಕ್ಕೆ ದೂರವಾಣಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳಿಗೆ ಕರೆ ಮಾಡಿದ್ದಾರೆ.
ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಸುಮಾರು ಐದು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಸಿಎಂ ತಮಗೆ ಕೋವಿಡ್ ತಗುಲಿರುವ ಬಗ್ಗೆ ವಿವರಣೆ ನೀಡಿದ್ದಾರೆ. ತಮ್ಮ ಜೊತೆಗೆ ಕುಟುಂಬದ ಇಬ್ಬರು ಸದಸ್ಯರಿಗೂ ಸೋಂಕು ತಗುಲಿದೆ ಎಂದಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು, ಎಲ್ಲರೂ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆಯೂ ಪ್ರಧಾನಿಗಳಿಗೆ ಮಾಹಿತಿ ನೀಡಿದ ಸಿಎಂ, ಇದೀಗ ಬೆಂಗಳೂರಿನಲ್ಲಿ ವರ್ಚುವಲ್ ಆಗಿ ಸಭೆ ನಡೆಸುತ್ತಿದ್ದೇನೆ. ಜನವರಿ 13ರಂದು ಸಂಜೆ ತಾವು ಕರೆದಿರುವ ಕೋವಿಡ್ ವರ್ಚುಯಲ್ ಸಭೆಗೆ ಪೂರ್ವಭಾವಿ ರೂಪದಲ್ಲಿ ಈ ಸಭೆ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ತಜ್ಞರು ನೀಡುವ ಸಲಹೆಗಳನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಣೆ ನೀಡಿದ್ದಾರೆ.