October 9, 2026
Friday, October 9, 2026
spot_img

ಕಡೆಗೂ ವಿಚಾರಣೆಗೆ ಹಾಜರಾದ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ತೀವ್ರ ವಿಚಾರಣೆ ನಡೆಸುತ್ತಿದ್ದು, ನಾಪತ್ತೆಯಾಗಿದ್ದ ಕೆಪಿಎಸ್‌ಸಿ ಸದಸ್ಯೆ ಡಾ. ಶಾಂತಾ ಹೊಸಮನಿ ಕಡೆಗೂ ವಿಚಾರಣೆಗೆ ಹಾಜರಾಗಿದ್ದಾರೆ.

ಕೆಪಿಎಸ್‌ಸಿ ಸದಸ್ಯೆ ಡಾ. ಶಾಂತಾ ಹೊಸಮನಿ ಕೆಎಎಸ್‌ ಸೇರಿದಂತೆ ಮೂರು ಪ್ರಮುಖ ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪವನ್ನು ಹೊತ್ತಿದ್ದಾರೆ. ಹೊಸಮನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ 52ನೇ ಸಿಸಿಹೆಚ್ ನ್ಯಾಯಾಲಯ ಕಳೆದ ವಾರ ವಜಾಗೊಳಿಸಿತ್ತು. ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಐಡಿ ಮುಂದೆ ಹಾಜರಾಗಿದ್ದಾರೆ.

ಕೆಎಎಸ್, ಪಶುವೈದ್ಯಾಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದು ಹುದ್ದೆ ಕೊಡಿಸಲು ಮುಂದಾಗಿದ್ದಾರೆ ಎಂಬ ಗಂಭೀರ ಆರೋಪಗಳು ಇವರ ಮೇಲಿವೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಜಾರಿ ನಿರ್ದೇಶನಾಲಯ ಹಾಗೂ ಸಿಐಡಿ ಪ್ರಕರಣವನ್ನು ತನಿಖೆ ಮಾಡಲು ಆರಂಭಿಸಿದಂತೆಯೇ ಶಾಂತಾ ಹೊಸಮನಿ ತಲೆಮರೆಸಿಕೊಂಡಿದ್ದರು. ಶಾಂತಾ ಹೊಸಮನಿ ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ಲುಕ್‌ಔಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು.

Must Read