ಹೊಸದಿಗಂತ ವರದಿ ಬೆಳಗಾವಿ:
ರಾಜ್ಯದಲ್ಲಿ ನಡೆದಿರುವ ಪಿಎಸ್ ಐ ಪರೀಕ್ಷೆಯ ಅಕ್ರಮ ಮಾಸುವ ಮುನ್ನ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆ ಅಕ್ರಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದಲ್ಲಿ ಕಳೆದ ಆಗಷ್ಟ್ 7ರಂದು ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ಪರೀಕ್ಷೆ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಸಾಕಷ್ಟು ವಿವಾದಗಳು ಕೇಳಿ ಬಂದಿತ್ತು. ಬೆಳಗಾವಿ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಅಕ್ರಮ ಪರೀಕ್ಷೆಯನ್ನು ನಡೆಸುವ ಜಾಲ ಸಕ್ರಿಯವಾಗಿದೆ ಎಂಬ ಮಾಹಿತಿ ಮೇರೆಗೆ ಬೆಳಗಾವಿಯ ಎಸ್‌ಪಿ ಡಾ. ಸಂಜೀವ ಪಾಟೀಲ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ತಂಡ 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಗೋಕಾಕ್ ಜಿ ಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪರೀಕ್ಷಾರ್ಥಿಯಿಂದ ಸ್ಮಾರ್ಟ್ ವಾಚ್ ಬಳಸಿ ಅಕ್ರಮ ನಡೆಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ವೇಳೆ ಸಿದ್ದಪ್ಪ ಮದಿಹಳ್ಳಿ ಎಂಬ ಪರೀಕ್ಷಾ ಅಭ್ಯರ್ಥಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಪರೀಕ್ಷೆ ನಡೆದ ಸಮಯದಲ್ಲಿ ಅಕ್ರಮ ಎಸಗಿದ 13 ಜನ ಅಭ್ಯರ್ಥಿಗಳು ಉತ್ತರ ಬರೆದಿರುವ ಮಾಹಿತಿಯನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ಬೇಧಿಸುವ ನಿಟ್ಟಿನಲ್ಲಿ 2 ತಂಡಗಳಾಗಿ ಪೊಲೀಸರು ಸಕ್ರಿಯವಾಗಿ ಕಾರ್ಯಾಚರಣೆ ನಡೆಸಿದ್ದಾರೆ.