Wednesday, October 5, 2022

Latest Posts

ಕಲೆಯಲ್ಲಿ ದೇವರನ್ನು ಕಾಣುವ ದೇಶ ನಮ್ಮದು – ಕಲ್ಲಡ್ಕ ಪ್ರಭಾಕರ ಭಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಲೆಯಲ್ಲಿ ದೇವರನ್ನು ಕಾಣುವ ದೇಶ ನಮ್ಮದು. ಎಲ್ಲಾ ಕಲೆಗಳೂ ದೇವರಿಗೆ ಅರ್ಪಿತವಾಗುವ ಕಾರಣ ಇಂದು ಕಲೆಗಳು ಶ್ರೇಷ್ಠತೆಯನ್ನು ಕಾಣುತ್ತಿದ್ದು ಎತ್ತರಕ್ಕೆ ಏರುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಭಿಪ್ರಾಯಪಟ್ಟರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ದ್ವಿತೀಯ ಚಾತುರ್ಮಾಸ್ಯದ ಸಂದರ್ಭದಲ್ಲಿ ಶನಿವಾರ ಜರಗಿದ ಕಲೆ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲಾ ಕಲೆಗಳಿಗೂ ಒಂದು ಉದ್ದೇಶವಿರುತ್ತದೆ. ದೇವತಾರಾಧನೆ ಇಲ್ಲದ ಕಲೆ ಭಾರತದಲ್ಲಿಲ್ಲ. ವೈಶಿಷ್ಟ್ಯಪೂರ್ಣವಾದ ಸಂಸ್ಕೃತಿ ನಮ್ಮ ದೇಶದ್ದಾಗಿದೆ. ಇಲ್ಲಿನ ಸಂಸ್ಕೃತಿ ಒಂದೇ, ಸಂಪ್ರದಾಯಗಳು ಹಲವು ಇದೆ. ಅಮ್ಮನಿಗೆ ವಿಶೇಷವಾದ ಸ್ಥಾನವನ್ನ ನೀಡಿದ ದೇಶ ನಮ್ಮದು. ಅಮ್ಮ ಎಂಬ ಶಬ್ದದಲ್ಲಿಯೇ ಭಾರತೀಯ ಸಂಸ್ಕೃತಿಯಿದೆ. ಭಾರತೀಯತೆ, ಭಾರತೀಯ ಕಲೆಗಳಿಂದ ನಮ್ಮ ದೇಶ ಸಮೃದ್ಧವಾಗಿದೆ. ಕಲೆ ಹಾಗೂ ಕಲಾವಿದರನ್ನು ಎಲ್ಲಾ ಸಂದರ್ಭಗಳಲ್ಲೂ ರಕ್ಷಿಸಿಕೊಂಡು ಬಂದ ಮಠವಿದು ಎಂದರು.

ಪಟ್ಲ ಫೌಂಡೇಶನ್‌ನ ಅಧ್ಯಕ್ಷ, ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿ ಕಲೆ ಹಾಗೂ ಕಲಾವಿದರಿಗೆ ಎಂದೆಂದೂ ಶ್ರೀಮಠವಿದೆ. ಮಠದ ಋಣವನ್ನು ಯಕ್ಷಗಾನ ಕಲಾವಿದರು ಎಂದಿಗೂ ಮರೆಯುವಂತಿಲ್ಲ. ಅನೇಕ ಕಾರ್ಯಕ್ರಮಗಳನ್ನು ಮಾಡಿಸಿ ಜನಮಾನಸದಲ್ಲಿ ಅಚ್ಚೊತ್ತಿ ಉಳಿದವರು ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಗಳು. ಪ್ರಸ್ತುತ ಇಂದು ಇಲ್ಲಿ ಎಲ್ಲಾ ಕಲೆಯನ್ನೂ ಒಂದೇ ದೃಷ್ಟಿಯಲ್ಲಿ ಕೊಂಡೊಯ್ಯುವ ಕಾರ್ಯ ಮುಂದುವರಿಯುತ್ತಿದೆ ಎಂದ ಅವರು ಎಡನೀರು ಮಠವು ಕಲಾವಿದರಿಗೆ ರಾಜಾಶ್ರಯವಾಗಿದೆ ಎಂದರು. ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

ಸನಾತನ ಧರ್ಮದ ಅಸ್ಮಿತೆಯನ್ನು ಕಾಪಾಡಿಕೊಂಡು ಬರುವಲ್ಲಿ ಭಾರತೀಯ ಕಲೆಗಳು ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ. ಕಲೆಯನ್ನು ಪ್ರೀತಿಸುವ, ಬೆಳೆಸುವ ವರ್ಗಗಳು ಇನ್ನಷ್ಟು ಹುಟ್ಟಿಕೊಳ್ಳಬೇಕು. – ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು, ಶ್ರೀ ಎಡನೀರು ಮಠ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!