ಹೊಸದಿಗಂತ, ಮಂಗಳೂರು:
ಪೊಡವಿಗೊಡೆಯ ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಸಂಭ್ರಮ ಮನೆಮಾಡಿದೆ.
ಸಹಸ್ರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯ ನಡುವೆ ಪುತ್ತಿಗೆ ಪರ್ಯಾಯ 2024ದ ಅಂಗವಾಗಿ ಇಂದು (ಜ.18) ಬೆಳ್ಳಂಬೆಳಗ್ಗೆ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಸರ್ವಜ್ಞ ಪೀಠಾರೋಹಣ ಸಂಪನ್ನಗೊಂಡಿದೆ.
ಬುಧವಾರ ಮಧ್ಯರಾತ್ರಿ 1:30ಕ್ಕೆ ಉಡುಪಿಯ ಕಾಪು ದಂಡತೀರ್ಥ ಸರೋವರದಲ್ಲಿ ಪುಣ್ಯಸ್ನಾನ ಪೂರೈಸಿದ ಶ್ರೀಗಳು ಬಳಿಕ ಜೋಡುಕಟ್ಟೆಗೆ ಆಗಮಿಸಿ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಬಳಿಕ ಭವ್ಯ ಪರ್ಯಾಯ ಮೆರವಣಿಗೆ ನಡೆಯಿತು. ಜೋಡುಕಟ್ಟೆಯಲ್ಲಿನ ಪುತ್ತಿಗೆ ಶ್ರೀಮಠದ ಪಟ್ಟದ ದೇವರು ಶ್ರೀ ವೀರ ವಿಠಲಗೆ ಪೂಜೆ ಸಮರ್ಪಣೆ ನಡೆಯಿತು. ಬಳಿಕ ಪರ್ಯಾಯ ಶ್ರೀಗಳು ಕೃಷ್ಣಮಠಕ್ಕೆ ಆಗಮಿಸಿ ಕನಕನ ಕಿಂಡಿಯ ಮೂಲಕ ಪೊಡವಿಗೊಡೆಯ ಶ್ರೀಕೃಷ್ಣನ, ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ ದರುಶನ ಪಡೆದರು.
ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರಿಗೆ ಮುಂದಿನ ಎರಡು ವರ್ಷಗಳ ಪರ್ಯಾಯದ ಜವಾಬ್ದಾರಿಯನ್ನು ಸರ್ವಜ್ಞ ಪೀಠಕ್ಕೆ ಏರಿಸುವ ಮೂಲಕ ನೀಡಿದರು.
ಕೃಷ್ಣಾಪುರ ಮಠದ ಎರಡು ವರ್ಷಗಳ ಪರ್ಯಾಯ ಅವಧಿ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಇಂದಿನಿಂದ ಪುತ್ತಿಗೆ ಮಠವು ಉಡುಪಿಯ ಶ್ರೀಕೃಷ್ಣ ದೇವರಿಗೆ ಉತ್ಸವ ಮತ್ತು ಪೂಜೆ ಸಲ್ಲಿಸುವ ಉಸ್ತುವಾರಿ ವಹಿಸಿಕೊಂಡಿದೆ.