ಕೆಎಸ್‌ಆರ್ ಟಿಸಿ ಕಂಡಕ್ಟರ್ ಆತ್ಮಹತ್ಯೆಗೆ ಯತ್ನ: ವಿಧಾನಸಭೆಯಲ್ಲಿ ಸಚಿವರ ರಾಜಿನಾಮೆಗೆ ವಿಪಕ್ಷಗಳ ಗದ್ದಲ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಮಂಡ್ಯ ಜಿಲ್ಲೆಯ ನಾಗಮಂಗಲ ಕೆಎಸ್‌ಆರ್ ಟಿಸಿ ಡಿಪೋ ಚಾಲಕ ಕಮ್ ಕಂಡಕ್ಟರ್ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಕೋಲಾಹಲ ಸೃಷ್ಟಿಯಾಗಿದೆ.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡದಿಂದ ಜಗದೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ನಡೆದು ಒಂದು ದಿನ ಕಳೆದರೂ ಎಫ್‌ಐಆರ್ ದಾಖಲಿಸಿಲ್ಲ. ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರನ್ನು ಸರ್ಕಾರ ರಕ್ಷಿಸುತ್ತಿದೆ.ತಕ್ಷಣ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಇದರ ಬೆನ್ನಲ್ಲೇ ಸರಕಾರ ವಿರುದ್ಧ ಮುಗಿಬಿದ್ದ ಕುಮಾರಸ್ವಾಮಿ, ಸರ್ಕಾರ ಅಧಿಕಾರಕ್ಕೆ ಬಂದ 50 ದಿನಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ರಾಜ್ಯದ ಕೆಲವು ಭಾಗಗಳಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕಾರಣಕ್ಕೆ ಒತ್ತಡ ಹಾಕಿ ವರ್ಗಾವಣೆ ಮಾಡಿರುವುದೇ ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದು ಆರೋಪಿಸಿದರು. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕೆಎಸ್ಆರ್ಟಿಸಿ ನೌಕರನ ಪತ್ನಿ ಪಂಚಾಯ್ತಿ ಸದಸ್ಯೆಯಾಗಿದ್ದು, ಅವರ ಮೇಲೆ ಅನಗತ್ಯ ಒತ್ತಡ ಹೇರಲಾಗಿದೆ ಎಂದು ಕುಮಾರಸ್ವಾಮಿ ದೂರಿದರು.

ಸಚಿವ ಚಲುವರಾಯಸ್ವಾಮಿ ವಿರುದ್ಧ ಸರಣಿ ಆರೋಪ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಶಾಸಕರಾದ ಪಿಎಂ ನರೇಂದ್ರಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು. ಕೆ.ಜೆ. ಜಾರ್ಜ್ ಮತ್ತು ಈಶ್ವರಪ್ಪ ಅವರು ಅಧಿಕಾರದಲ್ಲಿದ್ದಾಗ ಇದೇ ರೀತಿಯ ಘಟನೆಗಳು ನಡೆದಾಗ ರಾಜೀನಾಮೆ ನೀಡಿದ ಉದಾಹರಣೆಗಳನ್ನು ಉಲ್ಲೇಖಿಸಿ ಜೆಡಿಎಸ್ ನಾಯಕರೂ ಚಲುವರಾಯಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!