May 18, 2026
Monday, May 18, 2026
spot_img

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರಕ್ಕೆ ಬ್ರೇಕ್? ಮೇ 20 ರಂದು ಕರ್ತವ್ಯಕ್ಕೆ ಬರದಿದ್ದರೆ ಸಂಬಳ ಕಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20 ರಂದು ಬೃಹತ್ ಮುಷ್ಕರಕ್ಕೆ ಸಜ್ಜಾಗಿರುವ ಸರ್ಕಾರಿ ಸಾರಿಗೆ ನೌಕರರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭಾರಿ ಶಾಕ್ ನೀಡಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಾರ್ವಜನಿಕ ಸಾರಿಗೆಗೆ ಅಡ್ಡಿಪಡಿಸಿದರೆ ಕಠಿಣ ಶಿಸ್ತುಕ್ರಮ ಜರುಗಿಸುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಮ್‌ ಪಾಷಾ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

‘ನೋ ವರ್ಕ್, ನೋ ಪೇ’ ನಿಯಮ ಜಾರಿ

ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯು ಅತ್ಯಂತ ಕಠಿಣ ನಿಲುವನ್ನು ತಳೆದಿದ್ದು, ‘ಕೆಲಸವಿಲ್ಲದಿದ್ದರೆ ವೇತನವಿಲ್ಲ’ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ನಿರ್ಧರಿಸಿದೆ. ಮೇ 20 ರಂದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಂತಹ ಸಿಬ್ಬಂದಿಯ ಅಂದಿನ ದಿನದ ಸಂಬಳವನ್ನು ಕಡಿತಗೊಳಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.

ರಜೆ ರದ್ದು, ಕರ್ತವ್ಯ ಕಡ್ಡಾಯ

ಸಾರಿಗೆ ಸಂಸ್ಥೆಯು ಸಾರ್ವಜನಿಕ ಉಪಯುಕ್ತತೆಯ ಅತ್ಯಗತ್ಯ ಸೇವೆಯಾಗಿರುವುದರಿಂದ, ಅಂದು ಬಸ್‌ಗಳ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಬಾರದು ಎಂದು ಜವಾಬ್ದಾರಿಯುತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಎಲ್ಲಾ ಸಾರಿಗೆ ನೌಕರರು ಕಡ್ಡಾಯವಾಗಿ ಅಂದು ಕೆಲಸಕ್ಕೆ ಹಾಜರಾಗಬೇಕು.

ಅತ್ಯಂತ ಅನಿವಾರ್ಯ ಪರಿಸ್ಥಿತಿಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಕಾರಣಕ್ಕೂ ನೌಕರರಿಗೆ ರಜೆ ನೀಡಲಾಗುವುದಿಲ್ಲ.

ನಿಯಮ ಮೀರಿ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಸೇವಾ ನಿಯಮಾವಳಿಗಳ ಅನ್ವಯ ಇಲಾಖಾ ತನಿಖೆ ಮತ್ತು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಸಾರ್ವಜನಿಕರ ಹಿತರಕ್ಷಣೆಗೆ ಆದ್ಯತೆ

ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ನಿಗಮ ನಿರ್ಧರಿಸಿದೆ. ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಸಂಸ್ಥೆಯ ರಕ್ಷಣೆಗೆ ಧಾವಿಸಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಂಡಿ ಅಕ್ರಮ್ ಪಾಷಾ ಅವರು ನೌಕರರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !