ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸುಮಾರು 160 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಕುಮಾರಕೃಪಾ ಇದೀಗ ಗಂಗಾ ಆಗಿ ಬದಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೂತ ಅಧಿಕೃತ ಗೃಹವಾಗಿ ಕುಮಾರಕೃಪಾ ಸಿದ್ಧವಾಗಿದ್ದು, ಇದಕ್ಕೆ ಗಂಗಾ ಎಂದು ನಾಮಕರಣ ಮಾಡಲಾಗಿದೆ.
ಮೊದಲ ಕಾರ್ತಿಕ ಸೋಮವಾರವಾದ ಇಂದು ಶುಭ ಮಹೂರ್ತದಲ್ಲಿ ನೂತನ ನಿವಾಸದ ಗೃಹಪ್ರವೇಶ ನಡೆಯಲಿದೆ. ಬೆಳಗ್ಗೆ ಶುಭಗಳಿಗೆ ಇರುವ ಕಾರಣ ಈ ಮಹೂರ್ತದಲ್ಲಿಯೇ ಗೃಹಪ್ರವೇಶ ಮಾಡಲು ನಿರ್ಧರಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ನೊಣವಿನಕೆರೆ ಅಜ್ಜಯ್ಯನವರ ನೇತೃತ್ವದಲ್ಲಿ ನೂತನ ನಿವಾಸದ ಪೂಜೆ, ಹೋಮ, ಹವನಗಳು ಆರಂಭವಾಗಿವೆ. ಸಿಎಂ ಹಾಗೂ ಕುಟುಂಬದ ಸದಸ್ಯರು ಗಂಗಾದಲ್ಲಿಯೇ ನೆಲೆಸಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಇದು ಖಾಸಗಿ ಕಾರ್ಯಕ್ರಮವಾದ ಕಾರಣ ಮಾಧ್ಯಮದವರಿಗೆ, ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ. ಮುಖ್ಯ ದ್ವಾರದ ಬಳಿಯೇ ಪೊಲೀಸರು ಮಾಧ್ಯಮದವರನ್ನು ತಡೆದಿದ್ದಾರೆ. ಇಡೀ ಮನೆಯ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಇದೆ. ನವೆಂಬರ್ ಕೊನೆಯಲ್ಲಿ ಮುಖ್ಯಮಂತ್ರಿ ಇಡೀ ಕುಟುಂಬ ಸದಾಶಿವನಗರದಲ್ಲಿರುವ ಗಂಗಾ ನಿವಾಸಕ್ಕೆ ಸಂಪೂರ್ಣವಾಗಿ ಶಿಫ್ಟ್ ಆಗುವ ಸಾಧ್ಯತೆ ಇದೆ.
ಕಲ್ಲಿನಲ್ಲಿ ಕಟ್ಟಿರುವ ಈ ಕಟ್ಟಡವು ಮೈಸೂರಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಖಾಸಗಿ ನಿವಾಸವಾಗಿತ್ತು. ಅವರ ನಂತರ ಈ ಕಟ್ಟಡವನ್ನು ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ಅವರು ಸರ್ಕಾರದ ಆಸ್ತಿ ಎಂದು ಘೋಷಿಸಿದರು. ತದನಂತರ 1927ರಲ್ಲಿ ಮಹಾತ್ಮ ಗಾಂಧೀಜಿಗೆ ಬೆಂಗಳೂರಿಗೆ ಬಂದಿದ್ದಾಗ ಇದೇ ಕುಮಾರಕೃಪದಲ್ಲಿ ತಂಗಿದ್ದರು. ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರೂ ಇಲ್ಲಿ ವಾಸವಿದ್ದರು. ಇದೀಗ ನಮ್ಮ ನೂತನ ಮುಖ್ಯಮಂತ್ರಿ ಇಲ್ಲಿ ನೆಲೆಸಲಿದ್ದಾರೆ.



