ಹೊಸದಿಗಂತ ವರದಿ,ಮಂಡ್ಯ :
ಕುಮಾರಸ್ವಾಮಿ ಅವರು ಎರಡು ಮೂರು ತಿಂಗಳಿನಿಂದ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ. ಅವರ ರೀತಿ ಮಾತನಾಡೋದು ಸರಿ ಅಂದರೆ ನಾನೂ ಸಹ ಅವರಪ್ಪನ ತರ ಮಾತನಾಡುತ್ತೇನೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಗುಡುಗಿದರು.
ಮಳವಳ್ಳಿ ತಾಲೂಕು ಹಲಗೂರಿನಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ಯಾವ ಸಚಿವರು ಕರೆ ಮಾಡಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಲಿ, ಅವರ ಬಳಿ ಇರುವ ಪೆನ್‌ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದಿದ್ದರು. ಆದರೆ ಯಾವ ಸಚಿವರು ಕರೆ ಮಾಡಿ ದಾಖಲೆ ಬಿಡುಗಡೆ ಮಾಡಬೇಡಿ ಎಂದು ಹೇಳಿದ್ದಾರೆನ್ನುತ್ತಾರೆ. ಅವರ ಬಳಿ ಇರುವುದು ಪೆನ್‌ಡ್ರೈವ್ ಅಲ್ಲ. ಪೆನ್ಸಿಲ್ ಡ್ರೈವ್. ಇರೋದು ಅಳಿಸಿ ಹೋಗಿದೆ. ಕುಮಾರಸ್ವಾಮಿ ಉಪಯೋಗಿಸುವ ಭಾಷೆ ಸರಿ ಇದೆಯೇ ಎಂದು ಪ್ರಶ್ನಿಸಿದರು.
ಮೊನ್ನೆ ಮೊನ್ನೆಯವರೆಗೆ ನಾವು ಜಾತ್ಯಾತೀ ಅಂದಿದ್ದರು. ಮುಸ್ಲೀಂ, ದಲಿತ, ಹಿಂದುಳಿದವರ ಪರ ಎಂದು ಜಾತ್ಯಾತೀತ ಎಂದು ಹೆಸರಿಟ್ಟುಕೊಂಡಿದ್ದರು. ಈಗ ದತ್ತಮಾಲೆ ಹಾಕಿಕೊಳ್ಳುತ್ತೇನೆ ಅನ್ನುತ್ತಿದ್ದಾರೆ. ಯಾವುದನ್ನು ಹಾಕ್ಕೊತ್ತಾರೋ, ಯಾರ, ಯಾವ ಸಮಾಜದ ಪರ ನಿಲ್ಲುತ್ತಾರೋ ಗೊತ್ತಿಲ್ಲ ಎಂದು ಛೇಡಿಸಿದರು.
ಬಿಜೆಪಿಯವರು ಹೇಳಿದರೆ ಕುಮಾರಸ್ವಾಮಿ ಚಡ್ಡಿಯನ್ನೂ ಹಾಕಿಕೊಂಡು ಸಂತೋಷ ಪಡುತ್ತಾರೆ. ಅವರು ದತ್ತ ಮಾಲೆ ಹಾಕಿಕೊಂಡರೂ ಸಂತೋಷ, ಅದು ಅವರ ರಾಜಕಾರಣ ಮಾಡಿಕೊಳ್ಳಲಿ ಎಂದರು.
ಹಿಂದೆ ಕಮಿಷನ್ ಹೊಡೆದು ಅವರಿಗೆ ಅಭ್ಯಾಸವಾಗಿದೆ. ಅದಕ್ಕೆ ಅವರು ಬೇರೆಯವರಿಗೆ ಕಮಿಷನ್ ಹೊಡೆಯುತ್ತಾರೆ ಎಂದು ಹೇಳುತ್ತಾರೆ ಎಂದು ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.