ಕುಮಾರಸ್ವಾಮಿ ಸುಮ್ಮನೆ ಪ್ರಚಾರ ಮಾಡಿ ಯತೀಂದ್ರನನ್ನು ನಾಯಕನನ್ನಾಗಿ ಬೆಳೆಸುತ್ತಿದ್ದಾರೆ: ಡಿ ಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯತೀಂದ್ರ ಅವರು ಯಾವ ಅಧಿಕಾರಿ ಹೆಸರು, ಯಾವ ಹುದ್ದೆ, ಎಷ್ಟು ಲಂಚ ಎಂದು ಎಲ್ಲಿ ಹೇಳಿದ್ದಾರೆ. ಕುಮಾರಸ್ವಾಮಿ ಸುಮ್ಮನೆ ಪ್ರಚಾರ ಮಾಡಿ ನಮ್ಮ ಹುಡುಗನನ್ನು ನಾಯಕನನ್ನಾಗಿ ಬೆಳೆಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಯ ಜವಾಬ್ದಾರಿ ತೆಗೆದುಕೊಂಡು ತಮ್ಮ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ನಾನು ಬೆಳಗ್ಗೆಯೇ ಆ ವಿಡಿಯೋ ನೋಡಿದೆ. ವರ್ಗಾವಣೆ ದಂಧೆ ಎನ್ನಲು ಅವರು ಯಾವ ಅಧಿಕಾರಿ, ಯಾವ ಹುದ್ದೆ ಎಂದು ಉಲ್ಲೇಖವನ್ನೇ ಮಾಡಿಲ್ಲವಲ್ಲ. ಮಾಜಿ ಶಾಸಕರಾಗಿ ಯತೀಂದ್ರ ಅವರು ಒಂದು ವೇಳೆ ತಮ್ಮ ಕ್ಷೇತ್ರಕ್ಕೆ ಬೇಕಾದ 4-5 ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡರೆ ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಬಿಜೆಪಿ – ಜೆಡಿಎಸ್ ಅವರಿಗೆ ಮಾಡಲು ಕೆಲಸವಿಲ್ಲ. ಯತೀಂದ್ರ ಅವರು ಆಶ್ರಯ ಸಮಿತಿ ಅಧ್ಯಕ್ಷರು. ಒಂದಷ್ಟು ಶಾಲೆಗಳಿಗೆ ಸಿಎಸ್‌ಆರ್ ಅನುದಾನದ ಅಡಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ವಿವೇಕಾನಂದ ಅಥವಾ ಮಹದೇವಪ್ಪ ಎನ್ನುವ ಅಧಿಕಾರಿಗೆ ಶಾಲೆಗಳನ್ನು ಗುರುತಿಸುವ ಜವಾಬ್ದಾರಿ ನೀಡಿದ್ದಾರೆ. ಯಾರೋ ಒಂದಷ್ಟು ಶಾಲೆಗಳ ಹೆಸರನ್ನು ಬದಲಾಯಿಸಿದ ಕಾರಣ, ಸ್ಥಳೀಯರು ದೂರು ನೀಡಿದ್ದರು. ಅದಕ್ಕೆ ಯತೀಂದ್ರ ಅವರು ಇಂತಿಷ್ಟು ಹಳ್ಳಿಗಳ ಶಾಲೆಗಳಿಗೆ ಸೌಲಭ್ಯ ನೀಡುತ್ತೇವೆ ಎಂದು ಮಾತುಕೊಟ್ಟಿದ್ದು, ಅದರಂತೆ ಜನ ಸಂಪರ್ಕ ಸಭೆಯಲ್ಲಿಯೇ ಕರೆ ಮಾಡಿ ಮಾತನಾಡಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷರಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವಿರುತ್ತದೆ ಎಂದು ಹೇಳಿದರು.

ನಾನು ಅನೇಕ ಕೆಲಸಗಳನ್ನು ನನ್ನ ಕ್ಷೇತ್ರಗಳಲ್ಲಿ ಮಾಡಲು ಆಗುವುದಿಲ್ಲ. ಅವುಗಳನ್ನು ನನ್ನ ಸಹೋದರ, ಸಂಸದ ಸುರೇಶ್ ನೋಡಿಕೊಳ್ಳುತ್ತಾರೆ. ನಮ್ಮ ಕ್ಷೇತ್ರದ ಜನ ಮನೆ, ಹಸು, ಕುರಿ ಬೇಕು ಎಂದು ಮನವಿ ಸಲ್ಲಿಸಿರುತ್ತಾರೆ. ಆ ಅರ್ಜಿಗಳನ್ನು ನೋಡಿ ಸಹಿ ಹಾಕಿ ಕಳಿಸುತ್ತೇನೆ. ನನ್ನ ಕ್ಷೇತ್ರಗಳ ಕೆಲಸಗಳನ್ನು ಹೀಗೆಯೇ ಮಾಡುವುದು. ಬಗರ್ ಹುಕುಂ ಸಮಿತಿಗೆ ನಾನು ಅಧ್ಯಕ್ಷನಾಗಲು ಆಗುವುದಿಲ್ಲ. ಅದರ ಬದಲು ಸ್ಥಳೀಯ ನಾಯಕರಿಗೆ ಜವಾಬ್ದಾರಿ ನೀಡುತ್ತೇವೆ ಎಂದು ಡಿಕೆಶಿ ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!