August 29, 2026
Saturday, August 29, 2026
spot_img

ಕುಮಾರಸ್ವಾಮಿ ಧಮ್ಕಿ ನನ್ನ ಬಳಿ ನಡೆಯಲ್ಲ: ಹೆಚ್‌ಡಿಕೆ ವಿರುದ್ಧ ಎಚ್.ಸಿ. ಬಾಲಕೃಷ್ಣ ಗರಂ

ಹೊಸದಿಗಂತ ವರದಿ ರಾಮನಗರ:

ಕುಮಾರಸ್ವಾಮಿ ಅವರು ಬೇರೆಯವರಿಗೆ ಧಮ್ಮಿ ಹಾಕಿ ಹೆದರಿಸಿದಂತೆ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಅವರ ಧಮ್ಮಿ ನನ್ನ ಬಳಿ ನಡೆಯುವುದಿಲ್ಲ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು.

ಮಾಗಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಅದನ್ನು ಮೊದಲು ನೋಡಿಕೊಳ್ಳಲಿ. ಅದು ಬಿಟ್ಟು, ನನ್ನ ತಟ್ಟೆಯಲ್ಲಿರುವ ನೊಣದ ಚಿಂತೆ ಅವರಿಗೇಕೆ? ನನ್ನ ಬಗ್ಗೆ ಅವರು ಬಿಚ್ಚಿಟ್ಟರೆ, ನಾನೂ ಅವರ ಬಗ್ಗೆ ಬಿಚ್ಚಿಡುವೆ. ಬೇರೆಯವರ ವಿಷಯದಲ್ಲಿ ಬುರುಡೆ ಬಿಟ್ಟಂತೆ ನನ್ನ ಹತ್ತಿರ ಬಿಟ್ಟರೆ ನಡೆಯುವುದಿಲ್ಲ. ನನಗೆ ಸಿಟ್ಟು ಬಂದರೆ ಯಾರನ್ನೂ ಕೇರ್ ಮಾಡುವುದಿಲ್ಲ. ನಮ್ಮ ಹಳೆಯ ನಾಯಕ ಎಂದು ಗೌರವ ಕೊಟ್ಟು ಮಾತನಾಡುತ್ತಿದ್ದೇನೆ. ಆದರೆ, ಚಿಲ್ಲರೆ ಹೇಳಿಕೆಗಳ ಮೂಲಕ ಅವರೇ ತಮ್ಮ ಗೌರವ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಧರ್ಮಪತ್ನಿ, ಆಪ್ತ ಸಹಾಯಕರು ಹಾಗೂ ನಮ್ಮ ಸಮುದಾಯದ ಸ್ವಾಮೀಜಿಯ ಫೋನ್ ಕದ್ದಾಲಿಕೆ ಮಾಡಿದ್ದರು. ಪತ್ನಿ ಮೇಲೆಯೇ ನಂಬಿಕೆ ಇಲ್ಲದೆ ಸಮಾಜಕ್ಕೆ ಬುದ್ದಿವಾದ ಹೇಳುವ ಅವರಿಗೆ ನಾಚಿಕೆಯಾಗಬೇಕು ಎಂದರು.

ಬಾಲಕೃಷ್ಣ ಅವರು ನೆಲಮಂಗಲದಲ್ಲಿ ವ್ಯಕ್ತಿಯೊಬ್ಬರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ’ ಎಂಬ ಹೆಚ್‌ಡಿಕೆ ಹೇಳಿಕೆ ಕುರಿತು ಪಟ್ಟಣದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲಿದೆ ಗನ್? ಇದ್ದರೆ ತೆಗೆದುಕೊಂಡು ಬಂದು ನನಗೆ ಶೂಟ್ ಮಾಡಲಿ. ಇಲ್ಲದಿದ್ದರೆ ಅವರೇ ಶೂಟ್ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಬಳಿ ಬಂದೂಕು ಪರವಾನಗಿಯೇ ಇಲ್ಲ. ಬಂದೂಕು ಮತ್ತು ಕತ್ತಿ ತೋರಿಸಿ ರಾಜಕಾರಣ ಮಾಡುವ ಅಗತ್ಯವೂ ನನಗಿಲ್ಲ. ಕುಮಾರಸ್ವಾಮಿ ಅವರು ಈ ರೀತಿ ಹಿಟ್ ಆ್ಯಂಡ್ ರನ್ ಹೇಳಿಕೆ ನೀಡುವ ಬದಲು, ತಾವು ಹೇಳಿದ್ದನ್ನು ಸಾಬೀತುಪಡಿಸಲಿ. ಇಲ್ಲದಿದ್ದರೆ ಮುಂದೆ ನನ್ನ ಬಗ್ಗೆ ಮಾತನಾಡುವುದಿಲ್ಲ ಎಂದು ಬಹಿರಂಗವಾಗಿ ಕ್ಷಮೆ ಕೇಳಲಿ ಎಂದು ತಿಳಿಸಿದರು.

ಇದನ್ನೂ ಓದಿ:

ಕುಮಾರಸ್ವಾಮಿ ಅವರು ನನ್ನ ಬಗ್ಗೆ ಎಂತಹದ್ದೇ ವಿಷಯ ಎತ್ತಿದರೂ ನಾನು ಎದುರಿಸಲು ಸಿದ್ದನಿದ್ದೇನೆ. ಸಾರ್ವಜನಿಕ ಜೀವನದಲ್ಲಿ ನಾನು ಪಾರದರ್ಶಕವಾಗಿದ್ದೇನೆ. ಅದೇ ಕಾರಣಕ್ಕೆ ಜನ ನನ್ನ ಮೇಲೆ ವಿಶ್ವಾಸವಿಟ್ಟು ಐದು ಬಾರಿ ಗೆಲ್ಲಿಸಿದ್ದಾರೆ. ಹೆಚ್‌ಡಿಕೆ ಮೊದಲು ಕೇಂದ್ರ ಸರ್ಕಾರ ಕೊಟ್ಟಿರುವ ಜವಾಬ್ದಾರಿ ನಿರ್ವಹಿಸಲಿ. ಅದು ಬಿಟ್ಟು ಖಾಲಿ ತಿರುಗುತ್ತಾ ಅವರಿವರ ಬಗ್ಗೆ ವೃಥಾ ಆರೋಪ ಮಾಡುವುದನ್ನು ಬಿಡಬೇಕು ಎಂದರು.

ರಾಜ್ಯದ ಬಗ್ಗೆ ಕುಮಾರಸ್ವಾಮಿ ಕಳಕಳಿ ಇದ್ದಿದ್ದರೆ ಇಲ್ಲೇ ಉಳಿದು ರಾಜಕಾರಣ ಮಾಡಬೇಕಿತ್ತು. ಯಾಕೆ ಕೇಂದ್ರ ರಾಜಕಾರಣಕ್ಕೆ ಓಡಿ ಹೋದರು? ಮಂಡ್ಯದಲ್ಲಿ ತಮ್ಮ ಮಗನನನ್ನೇ ನಿಲ್ಲಿಸಿ ಸಂಸದನನ್ನಾಗಿ ಮಾಡದೆ, ಇವರೇ ಯಾಕೆ ಹೋಗಿ ನಿಂತರು? ಅವರು ತಮ್ಮ ಮಗನ ಬೆಳವಣಿಗೆಯನ್ನೂ ಸಹಿಸುವುದಿಲ್ಲ. ಅಂತಹವರು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸುತ್ತಾರೆಯೇ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !