October 5, 2026
Monday, October 5, 2026
spot_img

ಕರಾವಳಿಯಲ್ಲಿ ಕುಂಭದ್ರೋಣ ಮಳೆ: ಉಕ್ಕೇರಲು ಸಜ್ಜಾದ ನೇತ್ರಾವತಿ, ಬಂಟ್ವಾಳದ ಆಲಡ್ಕದಲ್ಲಿ ಆತಂಕದ ಸ್ಥಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಪಶ್ಚಿಮ ಘಟ್ಟ ಸಹಿತ ಕರಾವಳಿ ಭಾಗದಲ್ಲಿ ಕಳೆದ 24 ತಾಸುಗಳಿಂದ ಭಾರೀ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯ ನೀರಿನ ಮಟ್ಟ ಬಂಟ್ವಾಳದಲ್ಲಿ ಸಂಜೆ ದಿಢೀರ್ ಏರಿಕೆ ಕಂಡು ಆತಂಕ ಸೃಷ್ಟಿಯಾಗಿದೆ.


ನದಿಯಲ್ಲಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ರಾತ್ರಿಯಾಗುತ್ತಿದ್ದಂತೆ ರಸ್ತೆ ಪಕ್ಕ ನೀರು ನುಗ್ಗಲು ಹವಣಿಸಿದೆ.


ಸದ್ಯ ಇಲ್ಲಿನ ಪಾಣೆಮಂಗಳೂರಿನ ಆಲಡ್ಕದಲ್ಲಿ ಸುಮಾರು 15 ಕುಟುಂಬಗಳು ಅಪಾಯದಲ್ಲಿದ್ದು, ಅವರ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಸ್ಥಳೀಯ ಶಾಸಕ ರಾಜೇಶ್ ನಾಯ್ಕ ಈ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ನದಿ ನೀರು ಈಗಾಗಲೇ ಇಲ್ಲಿನ 10 ಮನೆಗಳ ಮೆಟ್ಟಿಲಿನವರೆಗೆ ತಲುಪಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ 15 ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.

ಇದರ ಜೊತೆಗೆ ತಗ್ಗುಪ್ರದೇಶಗಳಾದ ಕಂಚಿಕಾರ್ ಪೇಟೆ, ಬಸ್ತಿಪಡ್ಡು, ಜಕ್ರಿಬೆಟ್ಟು, ಎಸ್.ವಿ.ಎಸ್.ಶಾಲಾ ಮೈದಾನ, ನಾವೂರ,ನಂದಾವರ ಸಹಿತ ಅನೇಕ ಕಡೆಗಳಲ್ಲಿ ನೀರು ತುಂಬಿ ಜಲಾವೃತವಾಗುತ್ತದೆ. ಹಾಗಾಗಿ ಅವರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

Must Read