Sunday, March 26, 2023

Latest Posts

ಕುಶಾಲನಗರ-ಹಾರಂಗಿ ರಸ್ತೆ: 10 ಕೋಟಿ ವೆಚ್ಚದ ಕಾಮಗಾರಿ ಆರಂಭ

ಹೊಸದಿಗಂತ ವರದಿ,ಕುಶಾಲನಗರ:

ಕುಶಾಲನಗರದಿಂದ ಕೊಡಗಿನ ಪ್ರಮುಖ ಜಲಾಶಯವಾದ ಹಾರಂಗಿಗೆ ಸಂಪರ್ಕ ಕಲ್ಪಿಸುವ ಸುಮಾರು 10ಕಿ.ಮೀ. ಉದ್ದದ ರಸ್ತೆಯನ್ನು 10ಕೋಟಿ ರೂ.ವೆಚ್ಛದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಪ್ರವಾಸಿ ಕೇಂದ್ರವೂ ಆಗಿದ್ದು, ಇಲ್ಲಿನ ಉದ್ಯಾನವನ, ಆಧುನಿಕ ತಂತ್ರಜ್ಞಾನದ ಸಂಗೀತ ಕಾರಂಜಿ, ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ತಲೆಯೆತ್ತಿರುವ ಜಿಲ್ಲೆಯ ಮೂರನೆ ಸಾಕಾನೆ ಶಿಬಿರದ ವೀಕ್ಷಣೆಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರೊಂದಿಗೆ ಕುಶಾಲನಗರ ಹಾರಂಗಿ ನಡುವಿನ 10 ಕಿಲೋಮೀಟರ್ ದೂರದ ವ್ಯಾಪ್ತಿಯಲ್ಲಿ ಅನೇಕ ಉಪ ಗ್ರಾಮಗಳಿದ್ದು, ರಸ್ತೆ ಅವ್ಯವಸ್ಥೆಯಿಂದಾಗಿ ಈ ಭಾಗದ ಸಾರ್ವಜನಿಕರು, ಗ್ರಾಮಸ್ಥರು ವಾಹನಗಳಲ್ಲಿ ಓಡಾಡುವುದಕ್ಕೆ ಭಾರೀ ತೊಂದರೆಯಾಗಿತ್ತು.
ಸಾರ್ವಜನಿಕರ ಹೋರಾಟ ಮತ್ತು ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದ ಮೇರೆಗೆ ಈಗಾಗಲೇ ಕಾಮಗಾರಿಯ. ಭೂಮಿ ಪೂಜೆ ನಡೆದು, 10 ಕೋಟಿ ಹಣ ಬಿಡುಗಡೆಯಾದ ಹಿನ್ನೆಲೆಯಲ್ಲಿ ರಸ್ತೆಯ ಕಾಮಗಾರಿ ಇದೀಗ ಆರಂಭಗೊಂಡಿದೆ.
ಬಹುದಿನಗಳ ಬೇಡಿಕೆಯಾಗಿದ್ದ ಹಾರಂಗಿ- ಕುಶಾಲನಗರ ರಸ್ತೆಯ ಅಗಲೀಕರಣ, ಮತ್ತು ಮೇಲ್ಸೇತುವೆಗಳು, ನೀರಿನ ತೇವಾಂಶ ಅಧಿಕವಿರುವ ಕಡೆ ಕಾಂಕ್ರೀಟ್ ರಸ್ತೆ, ಉಳಿದ ಭಾಗಗಳಲ್ಲಿ ಡಾಮರೀಕರಣ ಕಾಮಗಾರಿಯು ಕಾವೇರಿ ನೀರಾವರಿ ಇಲಾಖೆಯ ಕ್ರಿಯಾ ಯೋಜನೆಯ ಅನುಸಾರ ನಡೆಯಲಿದ್ದು, ಈಗಾಗಲೇ ಬಿ.ಎಸ್. ಆರ್ ಗ್ರೂಪ್ ನವರು ಟೆಂಡರ್ ಪಡೆದು ಕಾಮಗಾರಿ ಆರಂಭಿಸಿದ್ದಾರೆ.
ಕಾವೇರಿ ನೀರಾವರಿ ನಿಗಮದ ಅಡಿಯಲ್ಲಿ ಈಗಾಗಲೇ ಹಾರಂಗಿ ಅಚ್ಚುಕಟ್ಟು ಪ್ರದೇಶದ ಉಪ ರಸ್ತೆ ಸೇರಿದಂತೆ ಹಾರಂಗಿಯಿಂದ ಕೊಡಗಿನ ಗಡಿ ಭಾಗದ ವಿವಿಧ ಗ್ರಾಮಗಳ ಉಪ ರಸ್ತೆಯ ಕಾಮಗಾರಿಗಳಿಗೆ 15 ಕೋಟಿಗೂ ಹೆಚ್ಚು ಹಣದ ಕಾಂಕ್ರೀಟ್ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ಶೇಕಡಾ 80 ರಷ್ಟು ಕಾಮಗಾರಿ ಮುಗಿಯುತ್ತಾ ಬಂದಿದೆ. ಅದೇ ರೀತಿ ಕುಶಾಲನಗರ-ಹಾರಂಗಿ ರಸ್ತೆಯ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗುತ್ತದೆ. ಈಗಿರುವ ರಸ್ತೆ ಬದಿಯ ಮರಗಳು ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರದ ನಂತರ ಅತಿ ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!