ಹೊಸ ದಿಗಂತ ವರದಿ, ಕುಶಾಲನಗರ:
ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿರುವ ಹಾರಂಗಿ ಜಲಾಶಯದ ಆವರಣದಲ್ಲಿರುವ ಸಂಗೀತ ಕಾರಂಜಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡ ಪರಿಣಾಮ ನೆರೆದಿದ್ದ ಸಹಸ್ರಾರು ಪ್ರವಾಸಿಗರು ಪರಿತಪಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ
ರಜಾದಿನಗಳು ಮಾತ್ರವಲ್ಲದೆ ಕ್ರಿಸ್ಮಸ್ ಮತ್ತು ವರ್ಷದ ಸಂಭ್ರಮದಲ್ಲಿರುವ ರಾಜ್ಯ ಮತ್ತು ಅಂತರರಾಜ್ಯದ ಪ್ರವಾಸಿಗರು, ಶಾಲೆಗಳಿಂದ ಪ್ರವಾಸಕ್ಕೆಂದು ವಿದ್ಯಾರ್ಥಿಗಳು ಕೊಡಗು ಜಿಲ್ಲೆಯತ್ತ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಅಂತೆಯೇ ಮಂಗಳವಾರ ಸಂಜೆ ಸಂಗೀತ ಕಾರಂಜಿ ವೀಕ್ಷಿಸಲು ಸಾವಿರಕ್ಕೂ ಅಧಿಕ ಮಂದಿ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ್ದರು. ಆದರೆ ಕಾರಂಜಿ ಚಾಲನೆ ಆಗಲು ಕೆಲ ನಿಮಿಷಗಳು ಬಾಕಿ ಇರುವಾಗಲೇ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಬಹಳ ಸಮಯ ಕಾದರೂ ವಿದ್ಯುತ್ ಬರದ ಕಾರಣ ಪ್ರವಾಸಿಗರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ಹಿಂತೆರಳಿದ್ದಾರೆ.
ಸಂಗೀತ ಕಾರಂಜಿಗೆಂದು ಪ್ರತ್ಯೇಕ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಈ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಂಗೀತ ಕಾರಂಜಿ ಪ್ರದೇಶದಿಂದ ಮುಖ್ಯದ್ವಾರಕ್ಕೆ ತೆರಳುವ ಮಾರ್ಗದಲ್ಲಿ ಕೂಡಾ ಬೆಳಕಿಲ್ಲದೆ ಪ್ರವಾಸಿಗರು ನಡೆದುಕೊಂಡು ಬರಲು ತೊಂದರೆ ಎದುರಿಸುವಂತಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ಕನಿಷ್ಟ ಜನರೇಟರ್ ವ್ಯವಸ್ಥೆ ಕೂಡಾ ಇಲ್ಲದಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಕಾದು ಬಸವಳಿದ ಬಹಳಷ್ಟು ಮಂದಿ ವಾಪಾಸ್ ತೆರಳಿದ ಬಳಿಕ ವಿದ್ಯುತ್ ಸರಬರಾಜಾಗಿದ್ದು, ಬಾಕಿ ಉಳಿದಿದ್ದವರಿಗೆ ಕಾರಂಜಿಯ ಪ್ರದರ್ಶನ ನೀಡಲಾಗಿದೆ.
ಈ ಅವ್ಯವಸ್ಥೆಯ ಬಗ್ಗೆ ಹಾರಂಗಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಪ್ರತಿಕ್ರಿಯೆ ಬಯಸಿದಾಗ, ಕಳೆದ 4 ತಿಂಗಳ ಹಿಂದೆಯೇ ಜನರೇಟರ್ ಖರೀದಿಗೆ ಪ್ರಸ್ತಾವನೆ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಅದಕ್ಕೆ ಅನುಮೋದನೆಯೂ ದೊರೆತಿದೆ. ಸಂಗೀತ ಕಾರಂಜಿಗೆಂದೇ 250 ಕೆವಿ ಸಾಮರ್ಥ್ಯದ ಒಂದು ಜನರೇಟರ್ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು ಮುಂದಿನ ಒಂದು ತಿಂಗಳ ಒಳಗಾಗಿ ಜನರೇಟರ್ ಅಳವಡಿಕೆ ಮಾಡಲಾಗುವುದು ಎಂದು ಹಾರಂಗಿ ನೀರಾವರಿ ವಿಭಾಗದ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.