ಹೊಸದಿಗಂತ ವರದಿ ಶಿವಮೊಗ್ಗ:
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ನಾಮಕರಣ ಮಾಡಲು ಸೋಮವಾರ ವಿಧಾನ ಸಭಾ ಅಧಿವೇಶನದಲ್ಲಿ ನಾನೇ ನಿರ್ಣಯ ಮಂಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಂಬಂಧ ಅವೇಶನದಲ್ಲಿಯೇ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳಿಸಲಾಗುತ್ತದೆ. ಈ ನಿಲ್ದಾಣವನ್ನು ಉದ್ಘಾಟಿಸಲು ಫೆ.27 ರಂದು ಮೋದಿಯವರು ಬರುವುದು ಖಚಿತವಾಗಿದೆ. ಅವರೇ ಕುವೆಂಪು ವಿಮಾನ ನಿಲ್ದಾಣವೆಂದು ಘೋಷಿಸಲಿದ್ದಾರೆ ಎಂದರು.
ಕುವೆಂಪು ಅವರು ವಿಶ್ವಮಾನವ ಸಂದೇಶ ಸಾರಿದ ಪ್ರಮುಖರು ಮಾತ್ರವಲ್ಲದೆ ಜ್ಞಾನಪೀಠ ಪಡೆದ ಮೊದಲ ಕನ್ನಡಿಗ ಕೂಡ. ನಾಡಗೀತೆಯನ್ನು ನೀಡಿದ್ದಾರೆ. ಹೀಗಾಗಿ ಅವರ ಹೆಸರೇ ಸೂಕ್ತವೆಂದು ಪರಿಗಣಿಸಲಾಗಿದೆ ಎಂದ ಅವರು, ನನ್ನ ಹೆಸರು ಬೇಡ ಎಂದು ಈ ಮೊದಲೇ ಹೇಳಿದ್ದೆ. ಆದರೂ ಮುಂಚೂಣಿಗೆ ತರಲಾಗಿತ್ತು ಎಂದರು.
ಅಮಿತ್ ಶಾ ಅವರ ಸೂಚನೆ ಮೇರೆಗೆ ಅಧಿವೇಶನದ ಬಳಿಕ ಹಳ್ಳಿಹಳ್ಳಿಗಳಿಗೆ ಪ್ರವಾಸ ಮಾಡಿ ಚುನಾವಣಾ ಪ್ರಚಾರ ಮಾಡುತ್ತೇನೆ. 140 ಸ್ಥಾನ ಗೆಲ್ಲಬೇಕೆಂಬ ಗುರಿ ನೀಡಿರುವುದರಿಂದ ಸರ್ವ ಪ್ರಯತ್ನ ಮಾಡಲಾಗುತ್ತದೆ. ಪ್ರಧಾನಿ ಮೋದಿಯವರು ಕೂಡ ನಮ್ಮೊಂದಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದರು.