ಕರ್ನಾಟಕ ಮೂಲದ ನಿ. ನ್ಯಾ| ಅಬ್ದುಲ್ ನಜೀರ್ ಆಂಧ್ರದ ನೂತನ ರಾಜ್ಯಪಾಲರಾಗಿ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತದ ರಾಷ್ಟ್ರಪತಿಗಳು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ಇಂದು ನೇಮಕಗೊಂಡ 12 ನೂತನ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗವರ್ನರ್​ಗಳ ಪಟ್ಟಿಯಲ್ಲಿ ಅಬ್ದುಲ್ ನಜೀರ್ ಹೆಸರೂ ಕೂಡ ಇದೆ. ದಕ್ಷಿಣಕನ್ನಡ ಜಿಲ್ಲೆಯವರಾದ ಅಬ್ದುಲ್ ನಜೀರ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕಳೆದ ತಿಂಗಳು ಜನವರಿ 4ರಂದು ನಿವೃತ್ತರಾಗಿದ್ದರು. ನ್ಯಾಯಮೂರ್ತಿ ನಜೀರ್ ಅವರು ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನ ಭಾಗವಾಗಿದ್ದರು.

ಜಸ್ಟಿಸ್ ನಜೀರ್ ಅವರು ಜನವರಿ 5, 1958 ರಂದು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದಲ್ಲಿ ಜನಿಸಿದರು. ಎಸ್ ಅಬ್ದುಲ್ ನಾಜಿರ್, ಮಹಾವೀರ ಕಾಲೇಜಿನಲ್ಲಿ ಬಿಕಾಂ ಮತ್ತು ಎಸ್​ಡಿಎಂ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು. ನಂತರ ಕರ್ನಾಟಕ ಹೈಕೋರ್ಟ್ ವಕೀಲರಾಗಿ ನೇಮಕವಾದರು. 2003ರಲ್ಲಿ ಅದೇ ಹೈಕೋರ್ಟ್​ನಲ್ಲಿ ಹೆಚ್ಚುವರಿ ನ್ಯಾಯಾಧೀಶರು ಮತ್ತು ನಂತರ ಖಾಯಂ ನ್ಯಾಯಾಧೀಶರಾಗಿ ನೇಮಕವಾದರು. 2017ರ ಫೆಬ್ರುವರಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವೇಳೆಯೇ 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗದೇ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ ಮೂರನೇ ಜಡ್ಜ್ ಅವರಾಗಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದ ಬೀಳ್ಕೊಡುವ ಸಂದರ್ಭದಲ್ಲಿ, ಸಿಜೆಐ ಡಿವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ನಜೀರ್ ಅವರ ಸರಳತೆಯ ಬಗ್ಗೆ ಪ್ರಸ್ತಾಪಿಸಿ, ನ್ಯಾಯಾಧೀಶರು 2019 ರವರೆಗೆ ಪಾಸ್‌ಪೋರ್ಟ್ ಸಹ ಹೊಂದಿಲ್ಲ ಮತ್ತು ಕೆಲವು ವಾರಗಳ ಹಿಂದೆಯಷ್ಟೇ ದೇಶದಿಂದ ಹೊರಗೆ ಮಾಸ್ಕೋಗೆ ಪ್ರಯಾಣಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!