ಕುವೆಂಪುರವರ ಘೋಷವಾಕ್ಯ ಬದಲಾವಣೆಗೆ ಯತ್ನ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ಹೊಸದಿಗಂತ ವರದಿ, ಮೈಸೂರು:

ರಾಜ್ಯ ಸರ್ಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಘೋಷವಾಕ್ಯವನ್ನು ಬದಲಾಯಿಸಿರುವ ಈ ಕ್ರಮವನ್ನು ಖಂಡಿಸಿ ಮಂಗಳವಾರ ನಗರದಲ್ಲಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು.

ನಗರದ ಡಾ. ರಾಜಕುಮಾರ್ ಉದ್ಯಾನವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿದರು.

ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ಘೋಷ ವಾಕ್ಯವನ್ನು ‘ಧ್ಯಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾಯಿಸಿ, ಈ ನೆಲದ ಸಂಸ್ಕೃತಿಯಾದ ವಿದ್ಯಾ ಮಂದಿರದ ಪವಿತ್ರವನ್ನು ಹಾಳು ಮಾಡಲು ಹೊರಟಿರುವ ಐಎಎಸ್ ಅಧಿಕಾರಿ ಮಣಿವಣ್ಣನ್ ನಡೆ ಅವಮಾನವೀಯ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ನಮ್ಮ ನಾಡಿಗೆ – ರಾಜ್ಯಕ್ಕೆ – ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಡುವ ಮೂಲಕ ಕುವೆಂಪು ಅವರು ನಮ್ಮ ರಾಜ್ಯದ ಆಸ್ತಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಘೋಷ ವಾಕ್ಯ, ದಶಕಗಳಿಂದ ಕೋಟ್ಯಾಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪ್ರೇರಣೆಯಾಗಿದೆ. ಕೈಮುಗಿದು ಒಳಗೆ ಬಾ ಎಂದರೆ, ಅಹಂಕಾರ ತೊರೆದು, ವಿನಯಶೀಲನಾಗಿ, ಜ್ಞಾನ ಸಂಪಾದಿಸಲು, ಭೇದಭಾವ ತೊರೆದು, ನಿನ್ನ ಹೆದರಿಕೆ ಎಲ್ಲವನ್ನೂ ಬಿಟ್ಟು ಬಂದು, ವಿದ್ಯೆಯನ್ನು ಶ್ರದ್ಧೆಯಿಂದ ಕಲಿಯೆಂದು.

ಇದನ್ನು ಅರಿಯದ, ನಮ್ಮ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅರಿವಿಲ್ಲದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ತನ್ನ ಮೌಖಿಕ ಆದೇಶದ ಮೇರೆಗೆ ವಸತಿ ಶಾಲೆಗಳಲ್ಲಿ ಬದಲಾವಣೆ ಮಾಡಿರೋದು ಅತ್ಯಂತ ಖಂಡನೀಯ, ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಸರ್ಕಾರ ಇದನ್ನು ಈ ಕೂಡಲೇ ಸರಿಪಡಿಸಬೇಕು ಹಾಗೂ ಮಣಿವಣ್ಣನ್ ರವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಈ ಧೈರ್ಯವಾಗಿ ಪ್ರಶ್ನಿಸು, ಎನ್ನುವ ಘೋಷವಾಕ್ಯವನ್ನು ತಾಕತ್ತಿದ್ದರೆ ವಿಧಾನಸೌಧದಲ್ಲಿ, ಸರ್ಕಾರಿ ಕಚೇರಿಗಳಲ್ಲಿ ,ಆರ್ ಟಿ ಓ, ಕಂದಾಯ ಇಲಾಖೆಗಳಲ್ಲಿ ಹಾಕಲಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರುಗಳಾದ ಕೃಷ್ಣಪ್ಪ, ಪ್ರಭುಶಂಕರ್ ಎಂ ಬಿ, ಪ್ರಜೀಶ್ ಪಿ, ಕುಮಾರ್ ಬಸಪ್ಪ, ಮಹದೇವಸ್ವಾಮಿ, ಹನುಮಂತಯ್ಯ, ರಾಮಕೃಷ್ಣೇಗೌಡ, ರಾಧಾಕೃಷ್ಣ, ವಿಷ್ಣು, ದರ್ಶನ್ ಗೌಡ, ಪದ್ಮ, ಸ್ವಾಮಿ ಗೌಡ, ಪ್ರದೀಪ್, ಗುರುಮಲ್ಲಪ್ಪ, ತ್ಯಾಗರಾಜ್ ಇನ್ನು ಮುಂತಾದವರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!