ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋಹನ್ಲಾಲ್,ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಎಲ್2 ಎಂಪುರಾನ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಸಿನಿಮಾದ ಬಗ್ಗೆ ಕೆಲ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು.
ಎಂಪುರಾನ್’ ಸಿನಿಮಾನಲ್ಲಿ ಬಿಜೆಪಿಗೆ ವ್ಯತಿರಿಕ್ತವಾಗಿರುವ ಕೆಲ ದೃಶ್ಯಗಳು, ಸಂಭಾಷಣೆಗಳು ಇವೆ . ಅಲ್ಲದೆ ಹಿಂದುಗಳನ್ನು ಟೀಕಿಸುವ ಕೆಲ ದೃಶ್ಯ ಹಾಗೂ ಸನ್ನಿವೇಶಗಳು ಇವೆ ಎನ್ನಲಾಗುತ್ತಿತ್ತು. ಇದೀಗ ಮೋಹನ್ಲಾಲ್ ಸಿನಿಮಾಕ್ಕೆ ಬರೋಬ್ಬರಿ 24 ಕಡೆ ಕತ್ತರಿ ಹಾಕಿದ್ದಾರೆ.
ಆರೋಪಗಳು ಕೇಳಿ ಬರುತ್ತಿದ್ದಂತೆ ನಟ ಮೋಹನ್ಲಾಲ್ ಕ್ಷಮೆ ಕೇಳಿದರು. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ ಮೋಹನ್ಲಾಲ್, ಯಾರ ಮನಸ್ಸಿಗೂ ಘಾಸಿ ಮಾಡುವುದು ಉದ್ದೇಶವಲ್ಲ ಎಂದಿದ್ದರು. ಅಲ್ಲದೆ ಅಗತ್ಯವಾದುದನ್ನು ಮಾಡುತ್ತೇನೆ ಎಂದಿದ್ದರು. ಆ ಮೂಲಕ ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸುತ್ತೇವೆ ಎಂದು ಸುಳಿವು ನೀಡಿದ್ದರು. ಇದೀಗ ಸಿನಿಮಾದ ಬರೋಬ್ಬರಿ 24 ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.
ಕೆಲವು ಪಾತ್ರಗಳ ಹೆಸರು ಬದಲಾವಣೆ ಮಾಡಲಾಗಿದೆ. ಸಂಭಾಷಣೆಗಳನ್ನು ಕೆಲವು ಕಡೆ ಮ್ಯೂಟ್ ಮಾಡಲಾಗಿದೆ. ಹಿನ್ನೆಲೆ ಸಂಗೀತ ಕೆಲವೆಡೆ ಬದಲಿಸಲಾಗಿದೆ . ಹೀಗೆ ಒಟ್ಟು 24 ಬದಲಾವಣೆಗಳನ್ನು ಸಿನಿಮಾಕ್ಕೆ ಮಾಡಲಾಗಿದೆ. ಸಿನಿಮಾದ ನಿರ್ಮಾಪಕ ಆಂಟೊನಿ ಪೆರಂಬೂರು, ಮೋಹನ್ಲಾಲ್ಗೆ ಬಹಳ ಆಪ್ತರಾಗಿದ್ದು, ಮೋಹನ್ಲಾಲ್ ಅವರೇ ಮುಂದೆನಿಂತು ದೃಶ್ಯಗಳಿಗೆ ಕತ್ತರಿ ಹಾಕಿಸಿದ್ದಾರೆ ಎನ್ನಲಾಗುತ್ತಿದೆ.