ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ಎಲ್ 2: ಎಂಪುರಾನ್ ಸಿನಿಮಾ ತೆರೆ ಕಂಡ 3ನೇ ದಿನವೇ ವಿವಾದದ ಸುಳಿಯಲ್ಲಿ ಸಿಲುಕಿದೆ.
ಈ ಸಿನಿಮಾದಲ್ಲಿ 2002ರ ಗುಜರಾತ್ ಗಲಭೆಯನ್ನು ಉಲ್ಲೇಖ ಮಾಡಲಾಗಿದೆ. ಜೊತೆಗೆ ಈ ಘಟನೆಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೋಹನ್ ಲಾಲ್ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ.
ಲೂಸಿಫರ್‌ನ 2ನೇ ಭಾಗವಾದ ಎಂಪುರಾನ್ ಚಿತ್ರದಲ್ಲಿ ಹೊರಹೊಮ್ಮಿದ ಕೆಲವು ರಾಜಕೀಯ, ಸಾಮಾಜಿಕ ವಿಷಯಗಳು ನನ್ನ ಅನೇಕ ಅಭಿಮಾನಿಗಳಿಗೆ ನಿರಾಸೆ ತರಿಸಿದೆ. ಕಲಾವಿದನಾಗಿ ನನ್ನ ಯಾವುದೇ ಚಲನಚಿತ್ರಗಳು ರಾಜಕೀಯ ಚಳವಳಿ, ಪರಿಕಲ್ಪನೆ ಅಥವಾ ಧರ್ಮದ ಬಗ್ಗೆ ದ್ವೇಷ ಭಾವನೆ ಮೂಡಿಸದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಹಾಗಾಗಿ ಎಂಪುರಾನ್ ತಂಡದ ಪರವಾಗಿ ನನ್ನ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಈ ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಹಾಗಾಗಿ ಧಕ್ಕೆ ತರುವ ಕೆಲ ದೃಶ್ಯಗಳನ್ನು ತೆಗೆದುಹಾಕಲು ತಂಡ ನಿರ್ಧರಿಸಿದೆ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.