ಹೊಸದಿಗಂತ ಡಿಜಿಟಲ್ ಡೆಸ್ಕ್;
ಮೈಸೂರು ಜಿಲ್ಲೆಯ ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಮೈಸೂರಿನ ದೊಡ್ಡಸ್ಪತ್ರೆಗೆ ತೆರಳುತ್ತಿದ್ದ ವೇಳೆ ಮಗು ಆಂಬ್ಯುಲೆನ್ಸ್ನಲ್ಲಿ ಮೃತಪಟ್ಟಿದ್ದು, ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ಇಲ್ಲದಿರುವುದೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ನಂಜನಗೂಡು ಪಟ್ಟಣದ ಶ್ರೀರಾಂಪುರ ಬಡಾವಣೆಯ ರತ್ನಮ್ಮ ಎನ್ನುವರ ಮಾರ್ಚ್ 17ರಂದು ಹೆರಿಗೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ಹೆರಿಯಾದ ಬಳಿಕ ಮಗು ನೀಲಿ ಬಣ್ಣಕ್ಕೆ ತಿರುಗಿದೆ. ಇದರಿಂದ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮಕ್ಕಳ ಆಸ್ಪತ್ರೆಗೆ ತೆರಳುತ್ತಿದ್ದರು. ಆದ್ರೆ, ದುರದೃಷ್ಟವಶಾತ್ ಮೈಸೂರು ತಲುಪುವ ಮುನ್ನವೇ ಮಗು ಮಾರ್ಗ ಮಧ್ಯೆ ಕೊನೆಯುಸಿರೆಳೆದಿದೆ.
ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ ತಿಳಿದಿದ್ದರೂ ಸಹ ಆಸ್ಪತ್ರೆ ಸಿಬ್ಬಂದಿ ಮಗುವಿನ ಜೀವವನ್ನು ಲೆಕ್ಕಿಸದೇ ಅದೇ ಆಂಬುಲೆನ್ಸ್‌ನಲ್ಲಿ ಮೈಸೂರಿಗೆ ರವಾನಿಸಲು ಮುಂದಾಗಿದ್ದಾರೆ. ಆದರೆ, ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಮಗುವಿನ ಉಸಿರು ನಿಂತಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಮಗುವಿನ ಸಾವಿಗೆ ಕಾರಣವೆಂದು ಪೋಷಕರು ಆರೋಪ ಮಾಡಿದ್ದಾರೆ.