ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೊಂದು ಗಂಭೀರ ಘಟನೆ. ಆದರೆ, ಇಲ್ಲಿಯೂ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿದೆ. ಸಹಜವಾಗಿಯೇ ಲೋಪ ಉಂಟಾಗಿದೆ ನಿಜ. ಆದರೆ, ಸಂಸತ್ತಿನ ಭದ್ರತೆಯು ಸ್ಪೀಕರ್ ಅಡಿಯಲ್ಲಿದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಸ್ಪೀಕರ್ ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ನಾವು ತನಿಖಾ ಸಮಿತಿಯನ್ನು ರಚನೆ ಮಾಡಿದ್ದು, ಆದಷ್ಟು ಬೇಗ ಸ್ಪೀಕರ್ಗೆ ವರದಿಯನ್ನು ಕಳುಹಿಸಿಕೊಡಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ಘಟನೆಯ ತನಿಖೆಯ ಹೊಣೆಯನ್ನು ಸಮಿತಿಗೆ ವಹಿಸಲಾಗಿದೆ. ಇದರ ಜೊತೆಗೆ ಭದ್ರತೆಯನ್ನು ಹೆಚ್ಚಿಸುವ ಬಗ್ಗೆಯೂ ಪರಿಶೀಲಿಸುವುದಾಗಿ ಶಾ ಭರವಸೆ ನೀಡಿದರು. ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ ಎಂಬುದು ನನ್ನ ಮನವಿ ಎಂದು ಹೇಳಿದರು.