ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಳೆದ ತಿಂಗಳು ಲಡಾಖ್ ನ ಲೇಹ್’ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಕುರಿತು ನ್ಯಾಯಾಂಗ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಆದೇಶಿಸಿದೆ.
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ ಎಸ್ ಚೌಹಾಣ್ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ.
ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ಮತ್ತು ಸ್ವಾಯತ್ತತೆಗಾಗಿ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ, ಗಾಯಗೊಂಡ ಹಾಗೂ ಬಂಧಿಸಲ್ಪಟ್ಟವರಿಗೆ ಬೆಂಬಲವಾಗಿ ನಾಳೆ ಲೇಹ್ ಅಪಲ್ಸ್ ಬಾಡಿ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸುವ ಮುಂಚೆಯೇ ಕೇಂದ್ರ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ.
ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ, ಪೊಲೀಸ್ ಕ್ರಮ ಮತ್ತು ನಾಲ್ವರು ವ್ಯಕ್ತಿಗಳ ದುರದೃಷ್ಟಕರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು,ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಗೌರವಾನ್ವಿತ ಡಾ. ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಅವರು ನ್ಯಾಯಾಂಗ ತನಿಖೆಯನ್ನು ನಡೆಸಲು ಸೂಚಿಸಿಸಲಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಸೆ.24ರಂದು ಲಡಾಖ್‌ನಲ್ಲಿ ಆರನೇ ಶೆಡ್ಯೂಲ್ ಸ್ಥಾನಮಾನ ಮತ್ತು ರಾಜ್ಯ ಸ್ಥಾನಮಾನಕ್ಕಾಗಿ ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆಯೂ ಹಿಂಸಾಚಾರದ ರೂಪ ಪಡೆದು ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದವು. ಇದರ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದರು ಮತ್ತು 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಹಿಂಸಾಚಾರದ ಘಟನೆ ಬಳಿಕ ಲಡಾಖ್ ನಲ್ಲಿ ರರ್ವ್ಯೂ ವಿಧಿಸಿ, ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಿದ್ದರು. ಜೊತೆಗೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಆರೋಪ ಹೊರಿಸಲಾದ LAB ನಾಯಕ ವಾಂಗ್‌ಚುಕ್ ಸೇರಿದಂತೆ 70 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ಸದ್ಯ ಇಂಟರ್ನೆಟ್ ಸೇರಿ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.