ಹೊಸದಿಗಂತ ಬೆಳಗಾವಿ:
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣವನ್ನು ಬೆಳಗಾವಿ ಪೊಲೀಸರು ಕ್ಷಿಪ್ರವಾಗಿ ಭೇದಿಸಿದ್ದಾರೆ. ಘಟನೆ ನಡೆದ ಕೇವಲ 24 ಗಂಟೆಗಳ ಒಳಗಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕ ಬಸವಂತ ಕಡೋಲ್ಕರ್ ಎಂಬುವವರ ಮೇಲೆ ನಿನ್ನೆ ದುಷ್ಕರ್ಮಿಗಳು ಚೂರಿಯಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದರು. ಈ ಸಂಬಂಧ ಹಲ್ಲೆಗೊಳಗಾದ ಬಸವಂತನ ಸ್ನೇಹಿತ ಮದನ ಎಂಬುವವರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಗಂಭೀರತೆಯನ್ನು ಪರಿಗಣಿಸಿ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರ ಮಾರ್ಗದರ್ಶನದಲ್ಲಿ, ಖಡೇಬಜಾರ್ ಎಸಿಪಿ ಶೇರಪ್ಪ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಕಾರ್ಯಾಚರಣೆಯ ಫಲವಾಗಿ ಶಿವಯ್ಯ ಪೂಜಾರಿ, ನಿತೇಶ್ ಬಡಿಗೇರ, ಮೌನಪ್ಪ ಮತ್ತು ಸಂಪತ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
“ಬಂಧಿತ ಆರೋಪಿಗಳು ಮತ್ತು ಹಲ್ಲೆಗೊಳಗಾದ ಬಸವಂತ ಈ ಹಿಂದೆ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಹಳೆಯ ದ್ವೇಷವೇ ಅಥವಾ ಇನ್ಯಾವುದೇ ವೈಯಕ್ತಿಕ ಕಾರಣಗಳಿವೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು,” ಎಂದು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ತಿಳಿಸಿದ್ದಾರೆ.

