ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ನ (IPL) ಮಾಜಿ ಮುಖ್ಯಸ್ಥ ಲಲಿತ್ ಮೋದಿ ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರವಾದ ವನವಾಟುವಿನ ಪೌರತ್ವ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಗುಡ್ ಬೈ ಹೇಳ್ತಾರೆ ಎನ್ನಲಾಗುತ್ತಿದೆ.
ಲಲಿತ್ ಮೋದಿ ಅವರು ತಮ್ಮ ಭಾರತೀಯ ಪಾಸ್ಪೋರ್ಟ್ ಅನ್ನು ಒಪ್ಪಿಸಲು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ಗೆ ಅರ್ಜಿ ಸಲ್ಲಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಶುಕ್ರವಾರ ಇದನ್ನು ದೃಢಪಡಿಸಿದೆ.
ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ಮನವಿಯನ್ನು ಪರಿಶೀಲಿಸಲಾಗುವುದು. ಅವರು ವನವಾಟುವಿನ ಪೌರತ್ವವನ್ನು ಪಡೆದುಕೊಂಡಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ಕಾನೂನಿನಡಿಯಲ್ಲಿನಾವು ಅವರ ವಿರುದ್ಧ ಪ್ರಕರಣವನ್ನು ಮುಂದುವರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ .
ಭಾರತೀಯ ತನಿಖಾ ಸಂಸ್ಥೆಗಳು ಆರ್ಥಿಕ ಅಪರಾಧಿ ಎಂದು ಘೋಷಿಸಿರುವ ಲಲಿತ್ ಮೋದಿ 2010ರಲ್ಲಿ ಭಾರತವನ್ನು ತೊರೆದು ಲಂಡನ್ನಲ್ಲಿ ವಾಸಿಸುತ್ತಿದ್ದು, ಇದೀಗ ಪೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರವಾದ ವನವಾಟುವಿನ (Vanuatu) ಪೌರತ್ವವನ್ನು ಪಡೆದಿದ್ದಾರೆ.
ಲಲಿತ್ ಮೋದಿ ವನವಾಟು ದೇಶವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಭಾರತೀಯ ಕಾನೂನಿನಿಂದ ತಪ್ಪಿಸಿಕೊಳ್ಳುವುದಷ್ಟೇ ಅಲ್ಲ, ಬಹುಶಃ ವನವಾಟುವಿನ “ಗೋಲ್ಡನ್ ಪಾಸ್ಪೋರ್ಟ್” ಕೂಡ ಕಾರಣವಿರಬಹುದು ಎನ್ನಲಾಗುತ್ತಿದೆ. ವನವಾಟು ದೇಶವು ಗೋಲ್ಡನ್ ಪಾಸ್ಪೋರ್ಟ್ ಎಂಬ ಯೋಜನೆಯನ್ನು ಹೊಂದಿದ್ದು, ಇದರಲ್ಲಿ ಶ್ರೀಮಂತರು ಹಣ ಕೊಟ್ಟು ಪೌರತ್ವವನ್ನು ಪಡೆಯಬಹುದು. ವನವಾಟುವಿನಲ್ಲಿ ಯಾವುದೇ ವೈಯಕ್ತಿಕ ತೆರಿಗೆ ಇಲ್ಲ. ಅಂದರೆ ನೀವು ಎಲ್ಲಿಯೇ ಸಂಪಾದಿಸಿದರೂ ವನವಾಟು ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಇದೇ ಕಾರಣಕ್ಕೆ ಲಲಿತ್ ಮೋದಿ ವನವಾಟು ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಐಪಿಎಲ್ನ ಅಧ್ಯಕ್ಷರಾಗಿದ್ದಾಗ ಕೋಟ್ಯಂತರ ರೂಪಾಯಿಗಳ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿ, ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ. ಲಲಿತ್ ಮೋದಿ ಅವರು ಮುಂಬೈನಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿಚಾರಣೆಯಲ್ಲಿ ಒಮ್ಮೆ ಮಾತ್ರ ಹಾಜರಾಗಿದ್ದರು. ಮೇ 2010ರಲ್ಲಿ, ಅವರು ದೇಶದಿಂದ ಪಲಾಯನ ಮಾಡಿ ಬ್ರಿಟನ್ ಗೆ ಪರಾರಿಯಾಗಿದ್ದರು.