ಹೊಸದಿಗಂತ ವರದಿ, ಮಂಗಳೂರು:
ಭಾರೀ ಆತಂಕ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನಾಪತ್ತೆಯಾದ ಸುಮಾರು 10 ದಿನದ ಬಳಿಕ ಮಾ.8ರ ಶನಿವಾರ ಆತನನ್ನು ಉಡುಪಿಯಲ್ಲಿ ಪತ್ತೆಹಚ್ಚಲಾಗಿದೆ.
ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಗಂತ್, ಫೆ. 25ರ ಮಂಗಳವಾರ ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದ. ಆದರೆ ಆತ ದೇವಸ್ಥಾನಕ್ಕೂ ಹೋಗದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದ. ಆತನ ಚಪ್ಪಲಿಗಳು ಹಾಗೂ ಮೊಬೈಲ್ ಫೋನ್ ಮನೆಯ ಸಮೀಪದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಿಗಂತ್‌ಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ ಪೊಲೀಸರು, 40 ಕ್ಕೂ ಅಧಿಕ ತಂಡ ರಚಿಸಿ ಕಾರ್ಯಾಚರಣೆಗಿಳಿದಿದ್ದರು. ಡಿಎಆರ್ ತಂಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್‌ಗಳಲ್ಲದೆ, ಡ್ರೋನ್ ಕ್ಯಾಮೆರಾಗಳನ್ನು ಬಳಿಸಿ ಕೂಡಾ ಹುಡುಕಾಟ ನಡೆದಿತ್ತು.
ಈ ನಡುವೆ ವಿದ್ಯಾರ್ಥಿ ದಿಗಂತ್ ಪತ್ತೆಗಾಗಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು. ದಿಗಂತ್ ಪತ್ತೆಗಾಗಿ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಕೂಡಾ ಸಲ್ಲಿಕೆಯಾಗಿತ್ತು. ಹೈಕೋರ್ಟ್ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆದು ಇದೇ ಮಾ.12 ರ ಒಳಗೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಆದೇಶ ಕೂಡಾ ನೀಡಲಾಗಿತ್ತು. ಈ ನಡುವೆ ದಿಗಂತ್ ಉಡುಪಿಯಲ್ಲಿ ಪತ್ತಾಯಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.