ಜಿಂದಾಲ್ ಗೆ ಭೂಮಿ: ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಎಂ‌.ಬಿ. ಪಾಟೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಿಂದಾಲ್ ಕಂಪನಿಗೆ 3,666 ಎಕರೆ ಕೊಡಲು ತೀರ್ಮಾನಿಸಿ, ಅದರಂತೆ ಸರ್ಕಾರಿ ಆದೇಶವನ್ನೂ‌ (2021ರ ಮೇ 6) ಹೊರಡಿಸಿತ್ತು. ಅದೇ ಆದೇಶವನ್ನು ಈಗ ಹೈಕೋರ್ಟ್ ಸೂಚನೆಯಂತೆ ಜಾರಿ ಮಾಡಲು ಮಾ.12ರಂದು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಇದರಲ್ಲಿ ಯಾವ ಅಕ್ರಮವೂ ನಡೆದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ‌.ಬಿ. ಪಾಟೀಲ್ ಭಾನುವಾರ ಸ್ಪಷ್ಟಪಡಿಸಿದರು.

ಜಿಂದಾಲ್‌ಗೆ ಭೂಮಿ ನೀಡಿರುವುದಕ್ಕೆ ವಿಪಕ್ಷಗಳಿಂದ ಆಕ್ಷೇಪ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಈ ವಿಷಯದಲ್ಲಿ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನುವ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರ ಆರೋಪ ನಿರಾಧಾರ. ಆಗೊಂದು ವೇಳೆ ಒಳ ಒಪ್ಪಂದ ಆಗಿದ್ದರೆ ಅದು ಅವರದ್ದೇ ಪಕ್ಷದ ಸರ್ಕಾರದ ಜತೆ ಆಗಿರಬೇಕು ಎಂದು ತಿರುಗೇಟು ನೀಡಿದರು.

ಯಡಿಯೂರಪ್ಪ ಸರ್ಕಾರದ ಆದೇಶ ಜಾರಿಯಾಗದ ಕಾರಣ ಜಿಂದಾಲ್ ಕಂಪನಿ ಹೈಕೋರ್ಟ್‌ಗೆ ಹೋಯಿತು. ಬಳಿಕ ಕೋರ್ಟ್ ಆ ಆದೇಶವನ್ನು ಪಾಲಿಸುವಂತೆ ಸೂಚಿಸಿತು. ಅದರಂತೆ ನಮ್ಮ ಸರ್ಕಾರ ನಡೆದುಕೊಂಡಿದೆ ಎಂದು ವಿವರಿಸಿದರು.

ಇಷ್ಟಕ್ಕೂ ಜಿಂದಾಲ್ ಕಂಪನಿ ರಾಜ್ಯದಲ್ಲಿ 90 ಸಾವಿರ‌ ಕೋಟಿ ರೂ. ಹೂಡಿಕೆ‌ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಸರ್ಕಾರದ ಷರತ್ತುಗಳನ್ನು ಪಾಲಿಸಿದ ನಂತರವೂ ಅವರಿಗೆ ಜಮೀನಿನ ಗುತ್ತಿಗೆ ಮಾರಾಟ ಮಾಡದಿದ್ದರೆ ಹೂಡಿಕೆ‌ ವಲಯಕ್ಕೆ ಕೆಟ್ಟ ಸಂದೇಶ ಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಸರ್ಕಾರ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೊಟ್ಟ ಹಾಗೆ ನಮ್ಮ ಸರ್ಕಾರ ಜಿಂದಾಲ್ ಕಂಪನಿಗೆ ಯಾವ ರಿಯಾಯಿತಿಯನ್ನೂ ಕೊಟ್ಟಿಲ್ಲ. 20 ವರ್ಷದ ಹಿಂದೆ ಇದ್ದ ಮಾರುಕಟ್ಟೆ ದರವನ್ನು ಆಧರಿಸಿ‌ಯೇ ಭೂಮಿ ದರ ನಿಗದಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!