ಹೊಸದಿಗಂತ ವರದಿ, ಮಂಗಳೂರು:
ಮಂಗಳೂರು – ಬೆಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಸಮೀಪದ ಎಡಕುಮೇರಿ – ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಉಂಟಾಗಿರುವ ಭೂ ಕುಸಿತದಿಂದ ಹಾನಿಗೀಡಾಗಿರುವ ರೈಲು ಮಾರ್ಗದ ದುರಸ್ತಿ ಕಾರ್ಯ ಸಮಾರೋಪಾದಿಯಲ್ಲಿ ನಡೆಯುತ್ತಿದೆ.
ರೈಲು ಮಾರ್ಗದ ಭೂ ಕುಸಿತ ಸಂಭವಿಸಿದ್ದು ಘಾಟಿ ಪ್ರದೇಶದಲ್ಲಾಗಿದೆ. ರೈಲ್ವೇ ಸೇತುವೆಗೆ ಹೊಂದಿಕೊಂಡಂತೆ ಭೂ ಕುಸಿತ ಉಂಟಾಗಿದೆ. ನಿರಂತರ ಮಳೆಯಾಗುತ್ತಿರುವುದು ಕೆಲಸ ನಿರ್ವಹಣೆಗೆ ಸವಾಲಾಗಿದ್ದು, ಇದರ ನಡುವೆಯೂ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.
430 ಸಿಬ್ಬಂದಿಗಳಿಂದ ಕಾರ್ಯ:
ಮಳೆಯ ನಡುವೆ ಕೆಲಸ ನಿರ್ವಹಿಸಲು ಎಲ್ಲಾ ಮೂಲ ಸೌಲಭ್ಯ, ಅಗತ್ಯ ಸಲಕರಣೆ, ಸೊತ್ತುಗಳೊಂದಿಗೆ ಒಟ್ಟು 430 ಸಿಬ್ಬಂದಿಗಳು ದುರಸ್ತಿ ಕಾರ್ಯದ ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಗಲು ಪಾಳಿಯಲ್ಲಿ 200 ಸಿಬ್ಬಂದಿ, ರಾತ್ರಿ ಪಾಳಿಯಲ್ಲಿ 120 ಸಿಬ್ಬಂದಿ ಹಾಗೂ ಇತರೆ 110 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಹಾರ ತಯಾರಿ, ಪೊರೈಕೆ ಹಾಗೂ ವೈದ್ಯಕೀಯ ತಂಡಗಳೂ ಸ್ಥಳದಲ್ಲಿದ್ದಾರೆ. ಸುಬ್ರಹ್ಮಣ್ಯ ನಿಲ್ದಾಣದಿಂದ ಆಹಾರ, ನೀರು ಸರಬರಾಜು ಮಾಡಲಾಗುತ್ತಿದ್ದು ಎರಡೂ ಪಾಳಿಯಲ್ಲೂ ಸಮಾರೋಪಾದಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.
ಬೆಳಕಿನ ವ್ಯವಸ್ಥೆ
ದುರಸ್ತಿಗೆ ಬೇಕಾಗಿರುವ ೮ ಜನರೇಟರ್‌ಗಳು, ಸಮರ್ಪಕ ಬೆಳಕಿನ ವ್ಯವಸ್ಥೆಯೊಂದಿಗೆ ಸಂಪರ್ಕ ನೆಟ್‌ವರ್ಕ್, ಇಂಟರ್ನೆಟ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಆರು ಹಿಟಾಚಿ ಯಂತ್ರಗಳು, ಐದು ಪೋಕ್ಲೈನ್ ಯಂತ್ರಗಳೂ ದುರಸ್ತಿ ಕಾರ್ಯದಲ್ಲಿ ಒಳಗೊಂಡಿದೆ.
1 ಲಕ್ಷ ಮರಳಿನ ಚೀಲ
ಅಗತ್ಯವಿರುವ ಬಂಡೆ ಕಲ್ಲುಗಳನ್ನು ವಿವಿಧೆಡೆಗಳಿಂದ ಪೊರೈಕೆ ಮಾಡಲಾಗುತ್ತಿದೆ. ಒಟ್ಟು 1 ಲಕ್ಷ ಮರಳಿನ ಚೀಲಗಳು ಅಗತ್ಯವಿದ್ದು, ಈಗಾಗಲೇ 15 ಸಾವಿರ ಚೀಲಗಳನ್ನು ವ್ಯವಸ್ಥೆ ಮಾಡಲಾಗಿದ್ದು, ೩೫ ಸಾವಿರ ಮರಳು ಚೀಲಗಳು ಘಟನಾ ಸ್ಥಳಕ್ಕೆ ಆಗಮಿಸುತ್ತಿದೆ. ಈ ನಡುವೆ ದುರಸ್ತಿ ಸ್ಥಳದಲ್ಲಿ ಬಿರುಸಿನ ದುರಸ್ತಿ ಕಾರ್ಯ ನಡೆಯುತ್ತಿದ್ದು, ರೈಲ್ವೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಹಿತಿ ಪಡೆದಿದ್ದಾರೆ.
4-5 ದಿನಗಳು ಬೇಕಿದೆ ದುರಸ್ತಿಗೆ?
ರೈಲು ಮಾರ್ಗದ ಕೆಳಭಾಗದಲ್ಲಿ ಸಂಭವಿಸಿರುವ ಭೂಕುಸಿತಕ್ಕೆ ಕೆಳ ಭಾಗದಿಂದ ಮಣ್ಣನ್ನು ಹಿಡಿದಿಡುವಂತೆ ತಡೆಯುವ ಕೆಲಸ ನಡೆಯುತ್ತಿದ್ದು, ಕಲ್ಲು ಬಂಡೆ, ಮರಳಿನ ಚೀಲ ಜೋಡಿಸಿ ತುಂಬಲಾಗುತ್ತದೆ. ಅದಕ್ಕೆ ಕಬ್ಬಿಣದ ನೆಟ್ ಮೂಲಕ ತಡೆಗೋಡೆ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಇನ್ನೂ 4-5 ದಿನಗಳು ದುರಸ್ತಿ ಕಾರ್ಯ ಪೂರ್ಣಗೊಳ್ಳಲು ಬೇಕಾಗಿದೆ ಎಂದು ತಿಳಿದುಬಂದಿದೆ. ಕೆಲ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದು, ಮೇಲಾಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಥಗಿತಗೊಂಡ ರೈಲುಗಳು:
ಬೆಂಗಳೂರು-ಕಣ್ಣೂರು(೧೬೫೧೧), ಕಣ್ಣೂರು-ಬೆಂಗಳೂರು(೧೬೫೧೨), ಬೆಂಗಳೂರು-ಕಾರವಾರ(೧೬೫೯೫),ಕಾರವಾರ-ಬೆಂಗಳೂರು(೧೬೫೯೬), ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ(೧೬೫೮೫), ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು(೧೬೫೮೬), ವಿಜಯಪುರ-ಮಂಗಳೂರು ಸೆಂಟ್ರಲ್(೦೭೩೭೭), ಮಂಗಳೂರು ಸೆಂಟ್ರಲ್-ವಿಜಯಪುರ(೦೭೩೭೮), ಯಶವಂತಪುರ-ಕಾರವಾರ(೧೬೫೧೫), ಕಾರವಾರ-ಯಶವಂತಪುರ(೧೬೫೧೬), ಯಶವಂತಪುರ-ಮಂಗಳೂರು ಜಂಕ್ಷನ್(೧೬೫೭೫), ಮಂಗಳೂರು ಜಂಕ್ಷನ್-ಯಶವಂತಪುರ(೧೬೫೭೬), ಯಶವಂತಪುರ-ಮಂಗಳೂರು ಜಂಕ್ಷನ್(೧೬೫೩೯), ಮಂಗಳೂರುಜಂಕ್ಷನ್ ಯಶವಂತಪುರ(೧೬೫೪೦) ರೈಲುಗಳು ಆದಿತ್ಯವಾರ ಸ್ಥಗಿತಗೊಂಡಿತ್ತು.