ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಭೂ ಕುಸಿತ: ಸಂಚಾರ ಸಂಪೂರ್ಣ ‌ಸ್ಥಗಿತ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಿದ್ದರೂ, ಅಲ್ಲಲ್ಲಿ ಭೂಕುಸಿತ, ಮರಗಳು ಧರೆಗುರುಳಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಬುಧವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಅಲ್ಲಲ್ಲಿ ಭೂ ಕುಸಿತ ಉಂಟಾಗಿದ್ದು, ಅನೇಕ ಕಡೆ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಮಡಿಕೇರಿಯಿಂದ ಭಾಗಮಂಡಲ-ಕರಿಕೆ-ಪಾಣತ್ತೂರು ಮಾರ್ಗವಾಗಿ ಕೇರಳದ ಕಾಂಞಂಗಾಡ್, ಕಾಸರಗೋಡುವಿಗೆ ತೆರಳುವವರಿಗೆ ಈ‌ ಮಾರ್ಗ ಸಮೀಪವಾಗಿದೆ. ಆದರೆ ಇದೀಗ ಭಾಗಮಂಡಲ ಕರಿಕೆ ರಸ್ತೆಯ ಕೊಟ್ಟಮಲೆ ಹಾಗೂ ಬಾಚಿಮಲೆಯಲ್ಲಿ ಕುಸಿತ ಉಂಟಾಗಿ‌ ಭಾರೀ ಪ್ರಮಾಣದ ಮಣ್ಣು ರಸ್ತೆಗೆ ಬಿದ್ದಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಮಳೆಯ ನಡುವೆಯೂ ಎರಡು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ‌ ಮತ್ತೆ ಮತ್ತೆ‌ ಬೆಟ್ಟದಿಂದ ಮಣ್ಣು ಹಾಗೂ ಕಲ್ಲು ರಸ್ತೆಗೆ ಜಾರುತ್ತಿದ್ದು, ತೆರವು ಕಾರ್ಯಾಚರಣೆಗೆ ಸವಾಲಾಗಿದೆ.
ಮಳೆ ವಿವರ:
ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 36.26 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ 89.73 ಮಿ.ಮೀ., ವೀರಾಜಪೇಟೆ ತಾಲೂಕಿನಲ್ಲಿ 8.25 ಮಿ.ಮೀ. ಹಾಗೂ
ಸೋಮವಾರಪೇಟೆ ತಾಲೂಕಿನಲ್ಲಿ 10.80 ಮಿ.ಮೀ.ಮಳೆ ದಾಖಲಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 35.40, ನಾಪೋಕ್ಲು 120.40, ಸಂಪಾಜೆ 105.50, ಭಾಗಮಂಡಲ 97.60, ವೀರಾಜಪೇಟೆ ಕಸಬಾ 7.20, ಹುದಿಕೇರಿ 10, ಶ್ರೀಮಂಗಲ 10.80, ಪೊನ್ನಂಪೇಟೆ 2, ಅಮ್ಮತ್ತಿ 4.50, ಬಾಳೆಲೆ 15, ಸೋಮವಾರಪೇಟೆ ಕಸಬಾ 17.20, ಶನಿವಾರಸಂತೆ 9.40, ಶಾಂತಳ್ಳಿ 8, ಕೊಡ್ಲಿಪೇಟೆ 9, ಕುಶಾಲನಗರ 14, ಸುಂಟಿಕೊಪ್ಪ 7.20 ಮಿ.ಮೀ. ಮಳೆ ಬಿದ್ದಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಗುರುವಾರ ನೀರಿನ ಮಟ್ಟ 2856.69 ಅಡಿಗಳಷ್ಟಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2856.55 ಅಡಿಗಳಾಗಿತ್ತು. ಪ್ರಸಕ್ತ ಜಲಾಶಯದ ಒಳಹರಿವು 2147 ಕ್ಯುಸೆಕ್’ನಷ್ಟಿದ್ದರೆ, ಕಳೆದ ವರ್ಷ ಇದೇ ದಿನಾಂಕದಂದು 6619 ಕ್ಯುಸೆಕ್’ನಷ್ಟಿತ್ತು. ಗುರುವಾರ ನದಿಗೆ 6014 ಕ್ಯುಸೆಕ್ ಹಾಗೂ ನಾಲೆಗೆ 20 ಕ್ಯುಸೆಕ್ ನೀರು ಹೊರಬಿಡಲಾಗಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಹೊರ ಹರಿವು ನದಿಗೆ 2825 ಕ್ಯುಸೆಕ್ ಹಾಗೂ ನಾಲೆಗೆ 311 ಕ್ಯುಸೆಕ್’ನಷ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!