ಹೊಸದಿಗಂತ ವರದಿ,ಮಂಗಳೂರು:
ಹಾಸನ ಜಿಲ್ಲೆಯ ಸಕಲೇಶಪುರ ಬಾಳ್ಳುಪೇಟೆಯ ನಡುವಿನ ಆಚಂಗಿ ದೊಡ್ಡ ನಾಗರ ಬಳಿ ರೈಲು ಹಳಿಯ ಮೇಲೆ ಗುಡ್ಡ ಕುಸಿದು ಬೃಹತ್ ಮಣ್ಣು ಹಳಿಯ ಮೇಲೆ ನಿಂತಿದೆ. ರೈಲ್ವೆ ಇಲಾಖೆಯು ರೈಲು ಸಮರ್ಪಕತೆಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಹಳಿಯ ಮೇಲೆ ಮಣ್ಣು ಕುಸಿತದ ಕಾರಣ ಮಂಗಳೂರು-ಬೆಂಗಳೂರು ನಡುವಣ ರೈಲು ಸಂಚಾರವನ್ನು ಅನಿರ್ಧಿಷ್ಟಾವಧಿಗೆ ರೈಲ್ವೆ ಇಲಾಖೆ ರದ್ದುಗೊಳಿಸಿದೆ.
ಈ ಹಿಂದೆ ಕುಸಿತಗೊಂಡ ಪ್ರದೇಶದಲ್ಲೇ ಮತ್ತೆ ಮಣ್ಣು ಕುಸಿತವಾಗಿದೆ. ಆಗಾಗ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅಂತರ್ಜಲ ಉಕ್ಕುತ್ತಿದೆ. ಅಂತರ್ಜಲದ ಕಾರಣದಿಂದ ಆಗಾಗ್ಗೆ ಭೂಕುಸಿತ ಉಂಟಾಗುತ್ತಿದೆ.ಆದುದರಿಂದ ಗುಡ್ಡ ಕುಸಿತ ತಡೆಗೆ ಬಲಿಷ್ಠವಾದ ಭದ್ರತೆಯ ತಡೆಯನ್ನು ರಚಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಮುಂದೆ ಈ ಪ್ರದೇಶದಲ್ಲಿ ಮತ್ತೆ ಇಂತಹ ಘಟನೆ ನಡೆಯದಂತೆ ತಡೆಯಲು ರೈಲ್ವೆ ಅಧಿಕಾರಿಗಳು ಮತ್ತು ಇಂಜೀನಿಯರ್‌ಗಳು ನೂತನ ಯೋಜನೆ ಅಳವಡಿಸುವ ಚಿಂತನೆ ಮಾಡಿದ್ದಾರೆ.ಅಲ್ಲದೆ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಇಂಜೀನಿಯರ್‌ಗಳು ಮೊಕ್ಕಾಂ ಹೂಡಿದ್ದಾರೆ.
ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ:
ಸುಮಾರು 400ಕ್ಕೂ ಅಧಿಕ ಕಾರ್ಮಿಕರು ಹಳಿಯ ಮೇಲೆ ಬಿದ್ದಿದ್ದ ಬೃಹತ್ ಪ್ರಮಾಣದ ಮಣ್ಣನ್ನು ತೆರವುಗೊಳಿಸಲು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಎರಡು ಜೆಸಿಬಿ ಮತ್ತು ಮೂರು ಹಿಟಾಚಿ ಯಂತ್ರಗಳ ಸಹಾಯದಿಂದ ಕಾರ್ಯಾಚರಣೆ ಸಮರೋಪಾದಿಯಲ್ಲಿ ಶನಿವಾರ ನಡೆಸಲಾಗಿದೆ.
ಆಗಾಗ್ಗೆ ಭಾರೀ ಮಳೆ ಕಾರ್ಯಾಚರಣೆಗೆ ನಿರಂತರವಾಗಿ ಅಡ್ಡಿಯಾಗುತ್ತಿತ್ತು. ಅಲ್ಲದೆ ಪರಿಹಾರ ಸಾಮಾಗ್ರಿಗಳೊಂದಿಗೆ ರಕ್ಷಣಾ ತಂಡವು ಸ್ಥಳದಲ್ಲಿ ಸನ್ನದ್ಧವಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಸಕಲೇಶಪುರದಲ್ಲಿ ತಡೆಯಲಾಯಿತು.ಇಲ್ಲಿ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಮುಂದಿನ ಪ್ರಯಾಣಕ್ಕೆ ಸೂಕ್ತ ವ್ಯವಸ್ಥೆ ಮಾಡಿತು. ಸುಮಾರು 6 ಬಸ್‌ಗಳಲ್ಲಿ 295 ಪ್ರಯಾಣಿಕರನ್ನು ಅವರವರ ಸ್ಥಳಗಳಿಗೆ ಪ್ರಯಾಣಿಸಲು ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿತು.ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲನ್ನು ಹಾಸನದಲ್ಲಿ ತಡೆದ ಕಾರಣ ಮುಂದೆ ತೆರಳಲಿರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮೊತ್ತವನ್ನು ಮರುಪಾವತಿಸಿತು.
12 ರೈಲುಗಳು ರದ್ದು:
ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಆಚಂಗಿ ದೊಡ್ಡನಾಗರ ಪ್ರದೇಶದಲ್ಲಿ ಗುಡ್ಡ ಕುಸಿದಿಂದಾಗಿ 12 ರೈಲುಗಳನ್ನು ರದ್ದುಗೊಳಿಸಲಾಗಿದೆ. ಆ.17 ರಂದು ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ(16585 ), ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು (16586 ), ಕೆಎಸ್‌ಆರ್ ಬೆಂಗಳೂರು-ಕಾರವಾರ(16595), ಕಾರವಾರ-ಕೆಎಸ್‌ಆರ್ ಬೆಂಗಳೂರು(16596), ಕೆಎಸ್‌ಆರ್ ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್(16511), ಕಣ್ಣೂರು-ಕೆಎಸ್‌ಆರ್ ಬೆಂಗಳೂರು(16512), ಯಶವಂತಪುರ-ಮಂಗಳೂರು ಜಂಕ್ಷನ್ (16539), ವಿಜಯಪುರ-ಮಂಗಳೂರು ಸೆಂಟ್ರಲ್(7377) ರದ್ದುಗೊಂಡಿದೆ. ಆ.18ರಂದು ಮಂಗಳೂರು ಜಂಕ್ಷನ್-ಯಶವಂತಪುರ(16540), ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್(07378),ಯಶವಂತಪುರ-ಮಂಗಳೂರು ಜಂಕ್ಷನ್(16575) ರದ್ದುಗೊಂಡಿದೆ.ಆ.19ರಂದು ಮಂಗಳೂರು ಜಂಕ್ಷನ್-ಯಶವಂತಪುರ(16576) ರೈಲು ರದ್ದುಗೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.