ಮಂಗಳೂರಿನಲ್ಲಿ ಮಣ್ಣು ಕುಸಿತ ದುರಂತ: ಓರ್ವ ಕಾರ್ಮಿಕ ಸಾವು, ಮತ್ತೋರ್ವನ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ನಗರದಲ್ಲಿ ಕಟ್ಟಡ ಕಾಮಗಾರಿ ವೇಳೆ ಉಂಟಾದ ಮಣ್ಣು ಕುಸಿತದಿಂದ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ. ಮಣ್ಣಿನಡಿ ಸಿಲುಕಿದ್ದ ಇಬ್ಬರ ಪೈಕಿ ಒಬ್ಬ ಕಾರ್ಮಿಕನನ್ನು ಬುಧವಾರ ಸಂಜೆ ರಕ್ಷಣೆ ಮಾಡಲಾಗಿತ್ತು. ಆದರೆ, ಮತ್ತೊಬ್ಬ ಕಾರ್ಮಿಕನ ರಕ್ಷಣೆಗಾಗಿ ಸತತ 6-7 ಗಂಟೆ ನಡೆದ ಕಾರ್ಯಾಚರಣೆ ಫಲ ನೀಡಲಿಲ್ಲ.

ಬಿಹಾರ ಮೂಲದ 30 ವರ್ಷದ ಚಂದನ್ ಮೃತ ಪಟ್ಟಿದ್ದಾನೆ.

ಮಂಗಳೂರಿನ ಬಲ್ಮಠ ರೋಡ್ ಸಮೀಪದಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಬಿಹಾರ ಮೂಲದ ಚಂದನ್ ಮತ್ತು ರಾಜಕುಮಾರ್ ಸಿಲುಕಿದ್ದರು. ಕಾರ್ಯಾಚರಣೆಯಲ್ಲಿ ಮೊದಲಿಗೆ ರಾಜಕುಮಾರ್‌ನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಚಂದನ್‌ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿತ್ತು. ಸತತ ಕಾರ್ಯಾಚರಣೆ ಬಳಿಕ ಮಣ್ಣಿನಡಿ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಂದನ್‌ನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಕಾರ್ಮಿಕ ಕೊನೆಯುಸಿರೆಳೆದಿದ್ದಾನೆ.

ಎಲ್ಲ ಕಟ್ಟಡ ಕಾಮಗಾರಿಗಳ ಸ್ಥಗಿತಕ್ಕೆ ಪಾಲಿಕೆ ಆದೇಶ
ಮಣ್ಣು ಕುಸಿತ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ಮಹಾನಗರ ಪಾಲಿಕೆ ನಗರದಾದ್ಯಂತ ಕಟ್ಟಡ ಕಾಮಗಾರಿ ಸ್ಥಗಿತಕ್ಕೆ ಆದೇಶ ಹೊರಡಿಸಿದೆ. ಮಳೆಗಾಲ ಮುಕ್ತಾಯವಾಗುವವರೆಗೆ ಎಲ್ಲಾ ಕಟ್ಟಡದ ಕಾಮಗಾರಿ ಸ್ಥಗಿತ ಮಾಡಲು ಸೂಚಿಸಲಾಗಿದೆ.

ಯಾವುದೇ ಕಟ್ಟಡದ ಕಾಮಗಾರಿಯನ್ನು ನಡೆಸದಂತೆ ಹಾಗೂ ಈಗಾಗಲೇ ಪ್ರಾರಂಭಿಸಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವಂತೆ ಸೂಚಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಂಡು ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!