ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಾರಾ ಅಲಿ ಖಾನ್ ವರ್ಷಕ್ಕೊಮ್ಮೆಯಾದರೂ ಕೇದಾರನಾಥ ಸ್ವಾಮಿಯ ದರುಶನ ಪಡೆಯುತ್ತಾರೆ. ಭೇಟಿ ಕೊಟ್ಟಾಗೆಲ್ಲವೂ ಕೇದಾರನಾಥದ ದೈವಿಕ ಅನುಭವಕ್ಕೆ ಮನಸೋತಿದ್ದೇನೆ. ಇದು ನನ್ನ ನೆಮ್ಮದಿಯ ತಾಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಾರೆ. ಈ ಬಾರಿ ದೇವಾಲಯಕ್ಕೆ ಭೇಟಿ ಕೊಟ್ಟಿರುವ ಕಾರಣ ಸಾರಾ ಅಲಿ ಖಾನ್ ವಿರುದ್ಧ ಫತ್ವಾ ಹೊರಡಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಇಸ್ಲಾಮಿಕ್ ಧರ್ಮಗುರು ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲಿ ಅವರು ಸಾರಾ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಇಸ್ಲಾಂ ಶರಿಯಾ ಕಾಯ್ದೆಯ ಪ್ರಕಾರ ಹಿಂದು ಧಾರ್ಮಿಕ ಕ್ಷೇತ್ರಕ್ಕೆ ತೆರಳಿ ಪೂಜೆ ಮಾಡುವುದು ಹರಾಮ್ ಎಂದು ಅವರು ಹೇಳಿದ್ದಾರೆ.
ಐದು ದಿನಗಳ ಹಿಂದೆ ಸಾರಾ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಭಕ್ತರ ಜೊತೆಗೆ ನಿಂತು ದೇವರ ದರುಶನ ಪಡೆದಿದ್ದರು. ಹಣೆಗೆ ಕುಂಕುಮ ಇಟ್ಟು, ತಲೆಯ ಮೇಲೆ ಹೊದಿಕೆ ಹಾಕಿರುವ ಸಾರಾ ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದನ್ನು ಧರ್ಮಗುರು ಖಂಡಿಸಿದ್ದು, ಸಾರಾ ಈಕೂಡಲೇ ಅಲ್ಲಾನಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಬದ್ರಿನಾಥ್ ಹಾಗೂ ಕೇದಾರನಾಥ ದೇವಾಲಯ ಸಮಿತಿಯು ಅನ್ಯಧರ್ಮೀಯರು ದೇಗುಲಕ್ಕೆ ಆಗಮಿಸಬೇಕು ಎಂದರೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಸಾರಾ ಅಲಿ ಖಾನ್ ಅವರ ತಂಡ ದೇವಾಲಯದ ಪ್ರವೇಶಕ್ಕೂ ಮುನ್ನವೇ ಪ್ರಮಾಣಪತ್ರವನ್ನು ಸಲ್ಲಿದೆ ಎಂದು ಸಮಿತಿ ಹೇಳಿದೆ. ಕೆಲವರು ಸಾರಾ ಅವರನ್ನು ಬೆಂಬಲಿಸಿದರೆ ಹಲವರು ಇದನ್ನು ತಪ್ಪು ಎಂದಿದ್ದಾರೆ.
ಸಾರಾ ಅಲಿ ಖಾನ್ ತಮ್ಮ ಮೊದಲ ಸಿನಿಮಾ ಪಯಣ ಆರಂಭಿಸಿದ್ದು ಕೇದಾರನಾಥದಿಂದಲೇ. ಕೇದಾರನಾಥ ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಸಮಯ ಕಳೆದಿದ್ದ ನಟಿ ಇಲ್ಲಿಗೆ ನಿಯಮಿತವಾಗಿ ಭೇಟಿ ನೀಡುತ್ತಲೇ ಇದ್ದಾರೆ. ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗಳಾದ ಸಾರಾ ಅರ್ಧ ಮುಸ್ಲಿಂ ಹಾಗೂ ಅರ್ಧ ಹಿಂದು ಆಗಿದ್ದಾರೆ. ದೇವರ ಆಯ್ಕೆ ಅವರವರ ಇಚ್ಛೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಫತ್ವಾ ಬಗ್ಗೆ ಸಾರಾ ಅಲಿ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.



