ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಮತದಾನ ಜೂನ್ 1 ರಂದು (ಶನಿವಾರ) ನಡೆಯಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
8 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.ಒಟ್ಟು 904 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇಂದು ಸಂಜೆ 6 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರ ಮುಕ್ತಾಯಗೊಳ್ಳಲಿದ್ದು, ಅಭ್ಯರ್ಥಿಗಳು ನಾಳೆ ಮನೆ ಮನೆ ಪ್ರಚಾರ ನಡೆಸಲಿದ್ದಾರೆ.
ಒಟ್ಟು ಸಲ್ಲಿಕೆಯಾಗಿದ್ದ 2078 ನಾಮಪತ್ರಗಳಲ್ಲಿ 1413 ನಾಮಪತ್ರಗಳು ಸ್ವೀಕೃತಿಯಾದರೆ, 598 ನಾಮಪತ್ರಗಳು ತಿರಸ್ಕೃತವಾಗಿವೆ. 57 ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲಾಗಿದ್ದು, ಕಣದಲ್ಲಿ 904 ಅಭ್ಯರ್ಥಿಗಳು ಉಳಿದಿದ್ದಾರೆ. ಪಂಜಾಬ್‌ನ ಲುಧಿಯಾನ ಕ್ಷೇತ್ರದಿಂದ (43) ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ಶಿಮ್ಲಾ ಕ್ಷೇತ್ರದಿಂದ (5) ಕಡಿಮೆ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ.
ಚುನಾವಣೆ ನಡೆಯಲಿರುವ ರಾಜ್ಯಗಳು
ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢ ರಾಜ್ಯದಲ್ಲಿ ಕೊನೆ ಹಂತದ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿರುವ ಮತದಾನ ಸಂಜೆ 6ರ ವರೆಗೆ ನಡೆಯಲಿದೆ. ಈ ಹಂತದಲ್ಲಿ ಬಿಹಾರದಿಂದ 134, ಚಂಡೀಗಢದಿಂದ 19, ಹಿಮಾಚಲ ಪ್ರದೇಶದಿಂದ 37, ಜಾರ್ಖಂಡ್‌ನಿಂದ 52, ಒಡಿಶಾದಿಂದ 66, ಪಂಜಾಬ್‌ನಿಂದ 328, ಉತ್ತರ ಪ್ರದೇಶದಿಂದ 144, ಪಶ್ಚಿಮ ಬಂಗಾಳದಿಂದ 124 ಅಭ್ಯರ್ಥಿಗಳು ಸೇರಿದಂತೆ ಒಟ್ಟು 904 ಹುರಿಯಾಳುಗಳು ಕಣದಲ್ಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಿದ್ದು, ಇಡೀ ಚಿತ್ತ ಈ ಕ್ಷೇತ್ರದತ್ತ ನೆಟ್ಟಿದೆ. ಇವರಷ್ಟೇ ಅಲ್ಲದೇ ಹಾಲಿ ಸಂಸದರಾದ ರವಿಶಂಕರ್ ಪ್ರಸಾದ್, ಆರ್.ಕೆ.ಸಿಂಗ್, ಆರ್‌ಜೆಡಿ ಅಭ್ಯರ್ಥಿಗಳಾದ ಮಿಸಾ ಭಾರತಿ, ಸುರೇಂದ್ರ ಪ್ರಸಾದ್ ಯಾದವ್ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.