ನನ್ನ, ಸಿಎಂ ಸಿದ್ದರಾಮಯ್ಯ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ: ಹೊಸ ಬಾಂಬ್‌ ಸಿಡಿಸಿದ ಡಿ.ಕೆ.ಶಿವಕುಮಾರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ.

ಕೇರಳದಲ್ಲಿ ನನ್ನ ಮೇಲೆ, ಸಿದ್ದರಾಮಯ್ಯ ಅವರ ಮೇಲೆ ಹಾಗೂ ನಮ್ಮ ಸರ್ಕಾರದ ಮೇಲೆ ಕೇರಳದಲ್ಲಿ ದೊಡ್ಡ ಪ್ರಯೋಗ ನಡೆಯುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಸುತ್ತಮುತ್ತ ಯಾಗ ನಡೆಯುತ್ತಿದೆ. ನನ್ನ ಹಾಗೂ ಸಿಎಂ ಮೇಲೆ ಯಾವ ಪೂಜೆ ನಡೆಯುತ್ತಿದೆ ಎಂಬುದು ಕೂಡ ಗೊತ್ತಿದೆ ಎಂದು ಹೇಳಿದ ಅವರು ಯಾರೋ ಬರೆದು ಕೊಟ್ಟಿದ್ದಾರೆ ಎಂಬುದಾಗಿ ಜೇಬಿನಲ್ಲಿರುವ ಚೀಟಿಯನ್ನು ತೆಗೆದು ನೋಡಿದ್ದಾರೆ.

ಇದಕ್ಕಾಗಿ ಪಂಚ ಬಲಿ ಕೊಡುತ್ತಿದ್ದಾರೆ. 21 ಕಪ್ಪು ಮೇಕೆ, 3 ಎಮ್ಮೆ, 21 ಕುರಿ, 5 ಹಂದಿ ಹಾಗೂ ಕೋಣವನ್ನು ಬಲಿ ಕೊಡುತಿದ್ದಾರೆ. ಈಗ ಯಾಗ ನಡೆಯುತ್ತಿದ್ದು, ಅವರ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಆದರೆ, ನಾವು ನಂಬಿದ ದೇವರು ನಮ್ಮನ್ನು ಕಾಪಾಡುತ್ತಾನೆ. ಎಲ್ಲ ಡೀಟೇಲ್ಸ್‌ ಅನ್ನು ಚೀಟಿ ಬರೆದುಕೊಟ್ಟಿದ್ದಾರೆ. ಯಾರು ಭಾಗಿಯಾಗಿದ್ದರೋ ಅವರೇ ನನಗೆ ಮಾಹಿತಿ ಕೊಟ್ಟಿದ್ದಾರೆ. ಇದೆಲ್ಲವನ್ನು ರಾಜಕೀಯದವರಲ್ಲದೆ ಬೇರೆ ಯಾರು ಮಾಡಲು ಸಾಧ್ಯ. ಆದರೆ, ಇದೆಲ್ಲವನ್ನು ನಾವು ನಂಬುವುದಿಲ್ಲ ಎಂಬುದಾಗಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮೂಲಗಳ ಪ್ರಕಾರ, ರಾಜ್ಯ ಸರ್ಕಾರದ ವಿರುದ್ಧ ಕೇರಳದಲ್ಲಿ ರಾಜಕಂಟಕ ಯಾಗ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಸಿಎಂ, ಡಿಸಿಎಂ ಮಾರಣ ಮೋಹನ ಸ್ತಂಭನ ಪ್ರಯೋಗ ಯಾಗ ನಡೆಯುತ್ತಿದೆ. ಕೇರಳದ ನಿರ್ಜನ ಪ್ರದೇಶದಲ್ಲಿ ನಡೆದಿದೆ ಎಂಬ ಮಾಹಿತಿ ಇದೆ. ಇದೇ ಮಾಹಿತಿ ಆಧರಿಸಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಜ”ಸ್ಥಾನ”ದಲ್ಲಿ ಕೂತವರ ವಿರುದ್ಧ ಪ್ರಯೋಗ ನಡೆದಿದೆ ಎಂದು ಪರೋಕ್ಷವಾಗಿ ಡಿಕೆಶಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!