ಹೊಸದಿಗಂತ ವರದಿ ಪುತ್ತೂರು:
ನಗರದಲ್ಲಿ ಸೋಮವಾರ ತಡರಾತ್ರಿ ತಲವಾರ್ ನಲ್ಲಿ ಕಡಿದು “ಕಲ್ಲೇಗ ಟೈಗರ್ಸ್” ಹುಲಿ ತಂಡದ ನಾಯಕನನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಲಾಗಿದೆ. ಅಕ್ಷಯ್ ಕಲ್ಲೇಗ(24) ಹತ್ಯೆಗೀಡಾದ ಯುವಕ.
ನಿನ್ನೆ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ನೆಹರೂ ನಗರದಲ್ಲಿದ್ದಾಗ ತಂಡವೊಂದು ಆಗಮಿಸಿ ತಲವಾರ್ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಚೇತನ್ ಮತ್ತು ಮನೀಶ್ ಎಂಬಿಬ್ಬರು ಪೊಲೀಸರಿಗೆ ಶರಣಾಗಿದ್ದು, ಕೊಲೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಇಬ್ಬರಿಂದ ಕೃತ್ಯ ನಡೆದಿರುವ ಮಾಹಿತಿ ಇದ್ದು, ಬೈಕ್ ಅಪಘಾತ ಒಂದಕ್ಕೆ ಸಂಬಂಧಿಸಿದ ಎರಡು ವಾಹನಗಳಿಗೆ ಸಂಬಂಧ ಪಟ್ಟವರ ನಡುವೆ ಮಾತುಕತೆ ನಡೆದು ಸಾವಿರ ಒಂದು ತಂಡಕ್ಕೆ ನೀಡಬೇಕಾಗಿತ್ತು. ಈ ಹಿನ್ನಲೆಯಲ್ಲಿ ವಾಗ್ವಾದ ನಡೆದು ಸ್ಥಳದಿಂದ ತೆರಳಿದ್ದರೂ ಬಳಿಕ ತಡರಾತ್ರಿ ಆಗಮಿಸಿ ಅಕ್ಷಯ್ ಅವರನ್ನು ತಲ್ವಾರ್ ನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.
ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿಯ ತುಸು ದೂರದಲ್ಲಿರುವ ಕೆನಾರ ಬ್ಯಾಂಕಿನ ಎಟಿಎಂ ಬಳಿ ಅಕ್ಷಯ್ ಮೇಲೆ ತಂಡ ದಾಳಿ ನಡೆಸಿದ್ದು, ಅಲ್ಲಿಂದ ಆತನನ್ನು ಅಟ್ಟಾಡಿಸಿಕೊಂಡು ಬಂದು ತಲವಾರಿನಿಂದ ದಾಳಿ ನಡೆಸಿದ್ದಾರೆ. ಎಟಿಎಂ ಬಳಿಯಿಂದ ಮಾಣಿ ಮೈಸೂರು ಹೆದ್ದಾರಿಯನ್ನು ದಾಟಿ ಆಚೆ ಬದಿ ಗಿಡಗಂಟಿಗಳಿಂದ ಆವೃತ್ತವಾದ ಜಾಗದವರೆಗೂ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಾಣಿ ಮೈಸೂರು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ರಕ್ತದ ಕಲೆಗಳಿವೆ.
ಅಕ್ಷಯ್ ಕಲ್ಲೇಗ ನವರಾತ್ರಿ ಸಂದರ್ಭದಲ್ಲಿ ಹುಲಿ ವೇಷ ಕುಣಿತ ಸಂಘಟಿಸಿದ್ದರು. ಬಿಗ್ ಬಾಸ್ ನಲ್ಲೂ ಹುಲಿ ವೇಷ ಕುಣಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.