ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿಯ ಸುವರ್ಣಸೌಧದ ಬಳಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆದಿತ್ತು. ಈ ಕುರಿತು ತನಿಖೆ ನಡೆಸುವಂತೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಇತರರು ಅರ್ಜಿ ಸಲ್ಲಿಸಿದರು.
ಅರ್ಜಿ ವಿಚಾರ ನಡೆಸಿದ ಧಾರವಾಡ ಹೈಕೋರ್ಟ್ ಇದೀಗ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದೆ.
ಇಂದು ಧಾರವಾಡ ಹೈಕೋರ್ಟ್ ಪೀಠದಲ್ಲಿ, ಸರ್ಕಾರ ಹಾಗೂ ಪಂಚಮಸಾಲಿ ಹೋರಾಟಗಾರರ ಎರಡು ಕಡೆಯಿಂದ ಕೋರ್ಟಿಗೆ ವಿಡಿಯೋ ಸಾಕ್ಷಾಧಾರ ಸಲ್ಲಿಕೆ ಮಾಡಲಾಗಿದೆ. ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ಹಾಜರಾಗಿ ವಾದ ಮಂಡಿಸಿ, ಗಲಾಟೆ ಮಾಡದಂತೆ ಶಾಸಕರು, ಸಚಿವರು ಖುದ್ದು ಭೇಟಿ ನೀಡಿ ಮನವಿ ಮಾಡಿದರು. ಆದರೂ ಕೂಡ ಪ್ರತಿಭಟನಾಕಾರರು ಕಲ್ಲು, ಚಪ್ಪಲಿ ತೋರಿದ್ದರು. ಸುವರ್ಣಸೌಧದ ಎದುರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಟಿಚಾರ್ಜ್ ಮಾಡಿದರು. ಕೇಸ್ ವಜಾ ಗೊಳಿಸುವಂತೆ ಇದೆ ವೇಳೆ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು.
ಬಳಿಕ ಪಂಚಮಸಾಲಿ ಹೋರಾಟಗಾರರ ಪರವಾಗಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿ ಪ್ರತಿಭಟನೆಗೆ ಬಂದಿದ್ದವರು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಾಗಿದ್ದರು. ಪ್ರತಿಭಟನಾ ಸ್ಥಳಕ್ಕೆ ಸಚಿವರು ಬಂದು ಹೋದ ನಂತರ ಲಾಠಿಚಾರ್ಜ್ ಆಗಿದೆ ಎಂದು ಪಂಚಮಸಾಲಿ ಹೋರಾಟಗಾರರ ಪರವಾಗಿ ವಕೀಲ ಪ್ರಭುಲಿಂಗ ನಾವದಗಿ ಮನವಿ ಮಾಡಿಕೊಂಡರು.
ವಾದ ಪ್ರತಿವಾದ ಆಲಿಸಿ, ಧಾರವಾಡ ಹೈಕೋರ್ಟ್ ಪೀಠ ಇದೀಗ ಪ್ರಕರಣದ ಕುರಿತು ಆದೇಶ ಕಾಯಿದಿರಿಸಿ ಆದೇಶ ಹೊರಡಿಸಿದೆ.