ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಲು ಅರ್ಜುನ್ ಅಭಿನಯದ ಪುಷ್ಪಾ2 ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹಲವು ದಾಖಲೆ ಬರೆದಿದೆ.ಎಲ್ಲೆಡೆ ಅಪಾರ ಮೆಚ್ಚುಗೆ ಸೇರಿದಂತೆ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗಿದೆ.
ಆದರೆ ಶಾಲಾ ಶಿಕ್ಷಕರು ಮಾತ್ರ ಅಲ್ಲು ಅರ್ಜುನ್ ಪುಷ್ಪಾ2 ಚಿತ್ರದಿಂದ ರೋಸಿ ಹೋಗಿದ್ದಾರೆ. ಈ ಚಿತ್ರ ಮಕ್ಕಳನ್ನು ಹಾಳು ಮಾಡುತ್ತಿದೆ ಎಂದು ದೂರಿದ್ದಾರೆ.
ಪುಷ್ಪಾ2 ಚಿತ್ರ ನೋಡಿದ ಬಳಿಕ ಮಕ್ಕಳು ಸ್ಮಗ್ಲಿಂಗ್ ನಾಯಕನ ಡೈಲಾಗ್ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕೆಟ್ಟ ಕೆಟ್ಟ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ನಡಿಗೆಯಲ್ಲೂ ಅಲ್ಲು ಅರ್ಜುನ್ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಪರೀಕ್ಷೆಯಲ್ಲಿ ಮತ್ತಷ್ಟು ಕಳಪೆಯಾಗಿದ್ದಾರೆ. ಅಸಂಬದ್ಧ ಉತ್ತರ ಹೇಳುತ್ತಾರೆ ಎಂದು ಹೈದರಾಬಾದ್‌ನ ಯೂಸುಫ್‌ಗುಡಾ ಸರ್ಕಾರಿ ಶಾಲಾ ಹೆಡ್‌ಮಾಸ್ಟರ್ ಆರೋಪಿಸಿದ್ದಾರೆ.
ಶಿಕ್ಷಣ ಆಯೋಗದ ಮುಂದೆ ಮಾತನಾಡಿದ ಸರ್ಕಾರಿ ಶಾಲಾ ಮುಖ್ಯೋಪಾದ್ಯಾಯಿನಿ, ಪುಷ್ಪ ರೀತಿಯ ಸಿನಿಮಾಗಳು ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ವಿದ್ಯಾರ್ಥಿಗಳು ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಶಾಲೆಯ ವಿದ್ಯಾರ್ಥಿಗಳ ವರ್ತನೆಯನ್ನು ನೋಡಿದಾಗ ಶಾಲಾ ಮುಖ್ಯಸ್ಥೆಯಾಗಿ ತಾನು ವಿಫಲನಾಗಿದ್ದೇನೆ ಎಂದು ಅನಿಸುತ್ತಿದೆ ಎಂದು ಶಿಕ್ಷಕಿ ವಿಡಿಯೋದಲ್ಲಿ ಹೇಳಿದ್ದಾರೆ.
ವಿದ್ಯಾರ್ಥಿಗಳು ವಿಚಿತ್ರವಾದ ಹೇರ್‌ಸ್ಟೈಲ್ ಮಾಡಿಕೊಂಡು ಶಾಲೆಗೆ ಆಗಮಿಸುತ್ತಿದ್ದಾರೆ. ಏನೇ ಕೇಳಿದರೂ ಸಿನಿಮಾದ ಡೈಲಾಗ್ ರೀತಿ ಮಾತನಾಡುತ್ತಾರೆ. ಕೆಟ್ಟ ಕೆಟ್ಟ ಪದ ಬಳಕೆ ಮಾಡಿ ಉತ್ತರಿಸುತ್ತಾರೆ. ನಾವು ಶಿಕ್ಷಣದ ಮೇಲೆ ಮಾತ್ರ ಗಮನ ಹರಿಸುತ್ತೇವೆ. ಆದರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಸ್ತು, ಚೌಕಟ್ಟು ಕೂಡ ಅತೀ ಮುಖ್ಯ. ಆದರೆ ಇದನ್ನು ನಿರ್ಲಕ್ಷಿಸುತ್ತಿದ್ದೇವೆ. ಇದು ಸರ್ಕಾರಿ ಶಾಲೆಗಳಲ್ಲಿ ಮಾತ್ರವಲ್ಲ, ಖಾಸಗಿ ಶಾಲೆಗಳಲ್ಲೂ ಇದೆ. ಒಬ್ಬ ಆಡಳಿತಾಧಿಕಾರಿಯಾಗಿ, ನಾನು ವಿಫಲನಾಗುತ್ತಿದ್ದೇನೆ ಎಂದು ನನಗೆ ಅನಿಸುತ್ತಿದೆ ಎಂದು ಶಾಲಾ ಮುಖ್ಯೋಪಾದ್ಯಾಯಿನಿ ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿಗಳನ್ನು ‘ಶಿಕ್ಷಿಸಲು ನನಗೆ ಇಷ್ಟವಿಲ್ಲ.ಇದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚುತ್ತದೆ. ಶಾಲೆಗೆ ಆಗಮಿಸುವ ಸಂಖ್ಯೆ ಕಡಿಮೆಯಾಗುತ್ತದೆ. ಶಿಕ್ಷೆಯಿಂದ ಮಕ್ಕಳಿಗೆ ಶಾಲೆ ನರಕವಾಗಿ ಅಥವಾ ಇಷ್ಟವಿಲ್ಲದ ಕೇಂದ್ರವಾಗಿ ಪರಿಣಿಸುತ್ತದೆ . ವಿದ್ಯಾರ್ಥಿಗಳ ವರ್ತನೆಗೆ ಸಾಮಾಜಿಕ ಮಾಧ್ಯಮ ಮತ್ತು ಸಿನಿಮಾಗಳೇ ಕಾರಣ ಎಂದು ಅವರು ದೂರಿದ್ದಾರೆ.
ಶಿಕ್ಷಕಿ ಮಾತುಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಪುಷ್ಪಾ2 ಸಿನಿಮಾ ಮಕ್ಕಳ ವರ್ತನೆ ಬದಲಾಗಲು ಕಾರಣ ಹೇಗೆ ಎಂದು ಪ್ರಶ್ನಿಸಿದ್ದಾರೆ. ಒಂದು ಒಳ್ಳೆ ಸಿನಿಮಾ ನೋಡಿ ಯಾರಾದರೂ ಬದಲಾಗುತ್ತಾರಾ? ಸಿನಿಮಾ ಸಣ್ಣ ಮಟ್ಟದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಆದರೆ ಇಷ್ಟು ಸಾಧ್ಯವಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.