ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿಯೇ ಮೊದಲ ಬಾರಿಗೆ ಅಮೆರಿಕದ ವಲಸೆ ಹಕ್ಕಿ ಲಾಫಿಂಗ್ ಗುಲ್ ಕೇರಳಕ್ಕೆ ಕಾಲಿಟ್ಟು ಅಚ್ಚರಿ ಮೂಡಿಸಿದೆ.
ಇಲ್ಲಿನ ಕಾಸರಗೋಡು ಸಮೀಪದ ಚಿತ್ತಾರಿ ಕಡಲತೀರದಲ್ಲಿ ಈ ಹಕ್ಕಿ ಪತ್ತೆಯಾಗಿದ್ದು, ಇದು ಉತ್ತರ ಅಮೆರಿಕದಿಂದ ಬರೋಬ್ಬರಿ ಹತ್ತು ಸಾವಿರ ಕಿಲೋಮೀಟರ್ ಕ್ರಮಿಸಿ ಇಲ್ಲಿಗೆ ತಲುಪಿದೆ.
ಪಕ್ಷಿಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಸಂಗ್ರಹಿಸುವ ಇ-ಬರ್ಡ್ ಆಪ್‌ನಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದ್ದು, ಪಕ್ಷಿಯ ಆಗಮನವನ್ನು ಇಂಡಿಯನ್ ಬರ್ಡ್ಸ್ ಜರ್ನಲ್ ಮುಖ್ಯ ಸಂಪಾದಕ ಜೆ. ಪ್ರವೀಣ್, ಜಿನು ಜಾರ್ಜ್, ಜಾನ್ ಗ್ಯಾರೆಟ್, ಏಡನ್ ಕೀಗ್ಲಿ ಮುಂತಾದವರು ಕೂಡಾ ಖಚಿತಪಡಿಸಿದ್ದಾರೆ.
ಅಮೆರಿಕದ ಅತಿಥಿಯ ಆಗಮನದೊಂದಿಗೆ ಈಗ ಭಾರತದಲ್ಲಿ ಕಂಡುಬರುವ ಪಕ್ಷಿ ಪ್ರಭೇದಗಳ ಸಂಖ್ಯೆ 1367 ಕ್ಕೆ ಏರಿಕೆಯಾಗಿದೆ.
ಯಾಕೆ ಈ ಹೆಸರು?
ಉತ್ತರ ಅಮೆರಿಕ, ದಕ್ಷಿಣ ಅಮೆರಿಕದ ಉತ್ತರ ಪ್ರದೇಶಗಳಲ್ಲಿ ಸಾಮಾನ್ಯವಾಗಿರುವ ಈ ಹಕ್ಕಿ ನಗುವ ಹಾಗೆ ಶಬ್ದ ಮಾಡುವುದರಿಂದ ಇವುಗಳಿಗೆ ‘ಲಾಫಿಂಗ್ ಗುಲ್’ ಎಂಬ ಹೆಸರು ಬಂದಿದೆ. ಕಪ್ಪು ಕೊಕ್ಕು ಮತ್ತು ಕಾಲುಗಳು. ರೆಕ್ಕೆಯ ಗಾಢ ಬಣ್ಣವನ್ನು ಇವು ಹೊಂದಿವೆ.